ತಡರಾತ್ರಿವರೆಗೂ ಗರ್ಭಿಣಿಯನ್ನು ಪೊಲೀಸ್ ಠಾಣೆಯಲ್ಲೇ ಕೂರಿಸಿಕೊಂಡ ಖಾಕಿ ಪಡೆ?
18 ವರ್ಷ ತುಂಬುವ ಮೊದಲೇ ಹುಡುಗಿ ಮದುವೆ ಆಗಿರಬಹುದು ಎಂಬ ಶಂಕೆ

ಬೆಂಗಳೂರು: ಪೊಲೀಸ್ ಇಲಾಖೆ ಪದೇ ಪದೇ ವಿವಾದದ ಸುಳಿಗೆ ಸಿಲುಕುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ 4 ತಿಂಗಳ ಗರ್ಭಿಣಿಯನ್ನ ತಡರಾತ್ರಿವರೆಗೂ ಶೇಷಾದ್ರಿಪುರಂ ಪೊಲೀಸರು ಠಾಣೆ ಒಳಗೇ ಕೂರಿಸಿಕೊಂಡ ಆರೋಪ ಕೇಳಿಬಂದಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲು ಸಂತ್ರಸ್ತ ಮಹಿಳೆ ಗಂಡನ ಜೊತೆಗೆ ಬಂದಿದ್ದರು.
ಈ ಸಮಯದಲ್ಲಿ ಪೊಲೀಸರು ಗರ್ಭಿಣಿಯನ್ನು ಠಾಣೆಗೆ ಕರೆದುಕೊಂಡು ಬಂದು ರಾತ್ರಿಯವರೆಗೆ ಇರಿಸಿಕೊಂಡ ಆರೋಪ ಈಗ ಮಾಡಲಾಗಿದೆ.
ಘಟನೆಗೆ ಕಾರಣ ಏನೆಂದರೆ, ಗರ್ಭಿಣಿ ತನ್ನ ಪತಿ ಜೊತೆಗೆ ಕೆಸಿ ಜನರಲ್ ಆಸ್ಪತ್ರೆಗೆ ಇಂಜೆಕ್ಷನ್ ಪಡೆಯಲು ಬಂದಿದ್ದರು. ಈ ವೇಳೆ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದಗ ಹುಡುಗಿ ವಯಸ್ಸು 18 ವರ್ಷ 4 ತಿಂಗಳು 20 ದಿನ ಎಂಬುದು ಬಯಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 18 ವರ್ಷ ತುಂಬುವ ಮೊದಲೇ ಹುಡುಗಿ ಮದುವೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹೀಗಾಗಿಯೇ ಶೇಷಾದ್ರಿಪುರಂ ಪೊಲೀಸರು ಗರ್ಭಿಣಿಯನ್ನ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪತಿ & ಪತ್ನಿಯನ್ನ ಠಾಣೆಗೆ ಕರೆಸಿದ ಪೊಲೀಸರು ಸಂಜೆ 6 ಗಂಟೆಯ ಒಳಗೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಬೇಕಾಗಿತ್ತು. ಆದರೂ, ಪೊಲೀಸರು ರಾತ್ರಿ 10 ಗಂಟೆ ತನಕ ದಂಪತಿಯನ್ನ ಠಾಣೆಯಲ್ಲೇ ಕೂರಿಸಿಕೊಂಡಿದ್ದ ಆರೋಪ ಕೇಳಿಬಂದಿದೆ.



