CrimeFeatureTechnology
Trending

Cyber Crime India: ಹಲೋ, ‘ಒಟಿಪಿ’ ಹೇಳಿ! 20 ಲಕ್ಷಕ್ಕೂ ಹೆಚ್ಚು ದೂರುಗಳು! ಸೈಬರ್‌ ಕ್ರೈಂನ ಭದ್ರಕೋಟೆಯಾಗಿವೆ ದೇಶದ 9 ರಾಜ್ಯಗಳು, 32 ಹಳ್ಳಿಗಳು

Cyber Crime India: ಸೈಬರ್‌ ಕ್ರೈಂ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಜಾರ್ಖಂಡ್‌ನ ‘ಜಾಮ್‌ತಾರಾ’ ಎಂಬ ಪುಟ್ಟ ತಾಣ. ಆಘಾತದ ಸಂಗತಿಯೆಂದರೆ, ಈಗ ದೇಶದಲ್ಲಿ 32 ಹಳ್ಳಿಗಳು ಜಾಮ್‌ತಾರಾದಂತೆ ಸೈಬರ್‌ ಕ್ರೈಂನ ಭದ್ರಕೋಟೆಯಾಗಿವೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ಎಲ್ಲರ ಮೊಬೈಲ್‌ಗೆ ವಂಚನೆಯ ಕರೆಗಳು ಬರುವುದೇ ಈ ಹಳ್ಳಿಗಳಿಂದ!

ಸುಮ್ಮನಿದ್ದ ಮೊಬೈಲು ಇದ್ದಕ್ಕಿದ್ದಂತೆ ರಿಂಗಣಿಸುತ್ತದೆ. ಯಾರದ್ದೋ ಹೊಸ ನಂಬರ್‌. ನೀವು ಬಹಳ ಕುತೂಹಲದಿಂದ ‘ಹಲೋ’ ಎನ್ನುತ್ತೀರಿ. ಆಚೆಯಿಂದ ಅಷ್ಟೇ ಉತ್ಸಾಹದ ಧ್ವನಿ: “ನಿಮ್ಮ ಆಧಾರ್‌- ಪ್ಯಾನ್‌ಗೆ ಲಿಂಕ್‌ ಆಗಿದ್ಯಾ?”. ನೀವು ಅಪ್ಪಿತಪ್ಪಿ “ಇಲ್ಲ” ಎಂದರೆ, ಅವರು ಮುಂದುವರಿಯುತ್ತಾರೆ. ನಿಮ್ಮ ಎಲ್ಲ ವಿವರಗಳನ್ನು ಕೇಳಿ, ಅವರೇ ಲಿಂಕ್‌ ಮಾಡಿಸುವಂತೆ ನಾಟಕವಾಡಿ, ಕೊನೆಗೆ ‘ಒಟಿಪಿ’ಯನ್ನೂ ಕಳುಹಿಸಿ, ಖಾತೆಯಲ್ಲಿದ್ದ ಹಣವನ್ನೆಲ್ಲ ಕ್ಷಣ ಮಾತ್ರದಲ್ಲಿ ದೋಚುತ್ತಾರೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಾಮಾನ್ಯವಾಗಿ ಸೈಬರ್‌ ವಂಚನೆಗಳು ನಡೆದಾಗಲೆಲ್ಲ ಜಾರ್ಖಂಡ್‌ನ ‘ಜಾಮ್‌ತಾರಾ’ ಎಂಬ ಕುಗ್ರಾಮ ನೆನಪಾಗುತ್ತಿತ್ತು. ಜಾಮ್‌ತಾರಾದಲ್ಲಿ ಸೈಬರ್‌ ವಂಚಕರು ಹೊಲದಲ್ಲಿ ರೈತನಾಗಿ ಉಳುಮೆ ಮಾಡುತ್ತಾ, ಕಾಡಿನಲ್ಲಿ ಕಟ್ಟಿಗೆ ಕಡಿಯುತ್ತಾ, ಹಳ್ಳದಲ್ಲಿ ಜಾನುವಾರುಗಳ ಮೈ ತೊಳೆಸುತ್ತಾ ಫೋನ್‌ನಲ್ಲಿ ಮಾತಾಡುತ್ತಿರುತ್ತಾರೆ. ಸೈಬರ್‌ ವಂಚಕ ಏಜೆನ್ಸಿಗಳು ನೀಡಿದ ಅಪರಿಚಿತ ನಂಬರ್‌ಗಳಿಗೆ ಹೀಗೆ ಕರೆ ಮಾಡುತ್ತಲೇ ಹಲವರನ್ನು ವಂಚಿಸುತ್ತಿರುತ್ತಾರೆ.

ದುರಂತವೆಂದರೆ ಈಗ ಜಾಮ್‌ತಾರಾ ಮಾತ್ರವೇ ಭಾರತದ ಸೈಬರ್‌ ಕ್ರೈಂ ಕ್ಯಾಪಿಟಲ್‌ ಅಲ್ಲ. ಇದರಂತೆ 32 ಹಳ್ಳಿಗಳು ಭಾರತದಲ್ಲಿ ಕಣ್ತೆರೆದಿದ್ದು, ನಮ್ಮ ನೆರೆಯ ಆಂಧ್ರ ಪ್ರದೇಶದ ಚಿತ್ತೂರಿನಲ್ಲೂ ಸೈಬರ್‌ಚೋರರು ಕುಳಿತು ವಂಚನೆಯ ದಂಧೆಗೆ ಇಳಿದಿದ್ದಾರೆ. “ದೇಶದ 9 ರಾಜ್ಯಗಳ 32 ಹಳ್ಳಿಗಳು ಸೈಬರ್‌ ಕ್ರೈಂನ ಭದ್ರಕೋಟೆಗಳಾಗಿವೆ,” ಎಂದು ಸ್ವತಃ ಕೇಂದ್ರ ಸರಕಾರ ಇತ್ತೀಚೆಗೆ ಸಂಸತ್ತಿಗೆ ಮಾಹಿತಿ ನೀಡಿದೆ.

9 ರಾಜ್ಯಗಳು, 32 ಹಳ್ಳಿಗಳು!

ದೇಶದ 9 ರಾಜ್ಯಗಳಲ್ಲಿ ಸುಮಾರು 3 ಡಜನ್‌ ಹಳ್ಳಿಗಳು ಮತ್ತು ನಗರಗಳು ಸೈಬರ್‌ ಕ್ರೈಂ ಪೋಷಿಸುತ್ತಿವೆ ಎಂದು ಸರಕಾರ ಹೇಳಿದೆ. ಈ ಪೈಕಿ ಕೆಲವು ಸೈಬರ್‌ ಚೋರರು ಸ್ಥಳೀಯರೇ ಅಲ್ಲ ಎನ್ನುವುದು ಇನ್ನೊಂದು ಆತಂಕಕಾರಿ ಸಂಗತಿ. ಪಾಕಿಸ್ತಾನ, ಚೀನಾ, ಟರ್ಕಿ ದೇಶದ ವಲಸಿಗರು ನಿರಂತರವಾಗಿ ಆನ್‌ಲೈನ್‌ ಅಪರಾಧ ಸೃಷ್ಟಿಸುತ್ತಿದ್ದಾರೆ ಎಂಬ ವರದಿ ಇದೆ. ಸೈಬರ್‌ಕ್ರೈಂನ ಹಾಟ್‌ಸ್ಪಾಟ್‌ಗಳಿರುವ ಈ 9 ರಾಜ್ಯಗಳೇ- ಹರಿಯಾಣ, ದೆಹಲಿ, ಜಾರ್ಖಂಡ್‌, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರ ಪ್ರದೇಶ, ಗುಜರಾತ್‌ ಮತ್ತು ಆಂಧ್ರ ಪ್ರದೇಶ.

ಸೈಬರ್‌ ಚೋರರು ಕುಳಿತ ತಾಣಗಳು

ಹರಿಯಾಣ: ಮೇವತ್‌, ಭಿವಾನಿ, ನುಹ್‌, ಪಲ್ವಾಲ್‌, ಮನೋಟಾ, ಹಸನ್ಪುರ, ಹತಾನ್‌ ಗ್ರಾಮ.

* ದಿಲ್ಲಿ: ಅಶೋಕ್‌ ನಗರ, ಉತ್ತಮ್‌ ನಗರ, ಶಕಪುರ, ಹರಕೇಶ್‌ ನಗರ, ಓಖ್ಲಾ, ಆಜಾದ್‌ಪುರ.

* ಬಿಹಾರ: ಬಂಕಾ, ಬೇಗುಸರೈ, ಜಮುಯಿ, ನವಾಡ, ನಳಂದಾ, ಗಯಾ.

ಅಸ್ಸಾಂ: ಬರ್‌ಪೇಟಾ, ಧುಬ್ರಿ, ಗೋಲ್ಪಾರಾ, ಮೋರಿಗಾಂವ್‌, ನಾಗಾವ್‌.

ಜಾರ್ಖಂಡ್‌: ಜಾಮ್‌ತಾರಾ, ದಿಯೋಘರ್‌.

ಪಶ್ಚಿಮ ಬಂಗಾಳ: ಅಸನ್ಸೋಲ್, ದುರ್ಗಾಪುರ.

ಗುಜರಾತ್‌: ಅಹಮದಾಬಾದ್‌, ಸೂರತ್‌.

ಉತ್ತರ ಪ್ರದೇಶ: ಅಜಂಗಢ.

ಆಂಧ್ರ ಪ್ರದೇಶ: ಚಿತ್ತೂರು

20 ಲಕ್ಷಕ್ಕೂ ಹೆಚ್ಚು ದೂರುಗಳು!

ಸೈಬರ್‌ಚೋರರ ಮೇಲೆ ಗೃಹ ಇಲಾಖೆ ನಿರಂತರವಾಗಿ ಕಣ್ಣಿಟ್ಟಿದೆ. ಇದಕ್ಕಾಗಿ 2020ರಲ್ಲಿ ಗೃಹ ಸಚಿವ ಅಮಿತ್‌ ಶಾ ವಿಶೇಷ ಪೋರ್ಟಲ್‌ ಆರಂಭಿಸಿದರು. ವಂಚನೆಗೊಳಗಾದವರು ಅಥವಾ ಸೈಬರ್‌ ಕ್ರೈಂಗೆ ಸಂಬಂಧಪಟ್ಟ ದೂರುಗಳನ್ನು ಈ ವೆಬ್‌ಸೈಟ್‌ನಲ್ಲಿ ನೇರವಾಗಿ ದಾಖಲಿಸಬಹುದಾಗಿದೆ. ಇಲ್ಲಿ ಇದುವರೆಗೆ 20 ಲಕ್ಷಕ್ಕೂ ಹೆಚ್ಚು ದೂರುಗಳು ಸ್ವೀಕೃತವಾಗಿವೆ. ಇದನ್ನು ಆಧರಿಸಿ ಒಟ್ಟು 40 ಸಾವಿರ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ಪೋರ್ಟಲ್‌ ಹೊರತಾಗಿ, ಸಹಾಯವಾಣಿ ಕೂಡ ಇದ್ದು, ದೇಶಾದ್ಯಂತ 250ಕ್ಕೂ ಹೆಚ್ಚು ಬ್ಯಾಂಕ್‌ಗಳಿಗೆ ಇದರ ಸಂಪರ್ಕ ಕಲ್ಪಿಸಲಾಗಿದೆ. ಸೈಬರ್‌ ಅಪರಾಧಕ್ಕೊಳಗಾದ 1.33 ಲಕ್ಷಕ್ಕೂ ಹೆಚ್ಚು ಸಂತ್ರಸ್ತರಿಂದ 235 ಕೋಟಿ ರೂ.ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವೆಬ್‌ಸೈಟ್‌: https://cybercrime.gov.in/

ಸಹಾಯವಾಣಿ: 1930

ನಾ ಕಂಡ ‘ಜಾಮ್‌ತಾರಾ’ ಕಥೆಯೂ…

ಈ ಮೊದಲು ಜಾರ್ಖಂಡ್‌ನ ಜಾಮ್‌ತಾರಾವನ್ನು ಸೈಬರ್‌ ಕ್ರೈಂನ ತವರು ಅಂತಲೇ ಕರೆಯಲಾಗುತ್ತಿತ್ತು. ವಂಚನೆಯ ಕರೆಗಳಿಂದ ಈ ಕುಗ್ರಾಮದ ಜನತೆಯ ಬದುಕು ಹೇಗೆಲ್ಲಬದಲಾಗಿದೆ ಎಂಬುದನ್ನು ರಾಂಚಿಯಲ್ಲಿ ನೆಲೆಸಿರುವ ಕನ್ನಡಿಗ, ಪ್ರಾಧ್ಯಾಪಕ ನಾಗಾ ಎಚ್‌. ಹುಬ್ಳಿ ಅವರು ಹೀಗೆ ವಿವರಿಸುತ್ತಾರೆ.

ಆದಿವಾಸಿಗಳನ್ನು ಕುರಿತಾದ ಅಧ್ಯಯನಕ್ಕೆ ಸಂಬಂಧಿಸಿದಂತೆ ನಾನು ಜಾಮ್‌ತಾರಾಕ್ಕೆ 2001ರಿಂದ ಇದುವರೆಗೆ 200ಕ್ಕೂ ಅಧಿಕ ಬಾರಿ ಭೇಟಿ ನೀಡಿದ್ದೇನೆ. 10 ವರ್ಷಗಳಿಂದೀಚೆಗೆ ಈ ಜಿಲ್ಲೆಯ ನೋಟವೇ ಬದಲಾಗಿದೆ. ಈ ಮೊದಲು ಗುಡಿಸಲು ಇದ್ದ ಸ್ಥಳದಲ್ಲಿ ದೊಡ್ಡ ದೊಡ್ಡ ಮನೆಗಳು, ಬಂಗಲೆಗಳು ನಿರ್ಮಾಣವಾಗಿವೆ; ಮನೆಯೊಳಗೆ ಫ್ರಿಡ್ಜು, ವಾಷಿಂಗ್‌ ಮೆಷೀನ್‌ಗಳಂಥ ಆಧುನಿಕ ಗೃಹೋಪಯೋಗಿ ವಸ್ತುಗಳೂ ಪ್ರವೇಶಿಸಿವೆ.

‘ಬೇಸಿಕ್‌ ಸೆಟ್‌’ ಬದಲಿಗೆ ‘ಆಂಡ್ರಾಯ್ಡ್‌ ಫೋನ್‌’ಗಳು ಮನೆ ಮನೆಯಲ್ಲಿಯೂ ರಿಂಗಣಿಸುತ್ತಿವೆ. ಪ್ರತಿ ಮನೆಯ ಮುಂದೆ ಲಕ್ಷುರಿ ಕಾರುಗಳು ನಿಂತಿವೆ.

ಇಲ್ಲಿಹೊಲ-ಗದ್ದೆ-ತೋಟ-ಬೆಟ್ಟ-ಕಾಡು… ಎಲ್ಲಿ ನೋಡಿದರೂ ಪುರುಷರು ಮಾತ್ರವಲ್ಲ, ಮಹಿಳೆಯರೂ ಮೊಬೈಲ್‌ ಹಿಡಿದುಕೊಂಡು ಒಂಟೊಂಟಿಯಾಗಿ ನಿಂತಿರುತ್ತಾರೆ. ಯಾರೊಂದಿಗೋ ಮಾತನಾಡುತ್ತಿರುತ್ತಾರೆ. ‘ಕೆಲಸದ ಅವಧಿ’ಯ ಮಿತಿಯೂ ಇಲ್ಲ.

ವಿಶೇಷವೆಂದರೆ, ಅವರು ಈ ‘ಕಾರ್ಯ’ಕ್ಕಾಗಿ ಬಳಸುವ ಸಿಮ್‌ ಅವರ ಹೆಸರಿನಲ್ಲಿ ಇರುವುದೇ ಇಲ್ಲ! ಕೆಲವರಿಗೆ ಅವರೇ ಯಜಮಾನರು; ಇನ್ನು ಕೆಲವರಿಗೆ ಒಂದು ‘ಡೀಲ್‌’ಗೆ ಇಂತಿಷ್ಟು ಎಂದು ನಿಗದಿಯಾಗಿರುತ್ತದೆ. ಅಷ್ಟೇ ಅಲ್ಲ, ಕೆಲವರು ತಿಂಗಳ ಸಂಬಳಕ್ಕೆ ದುಡಿದರೆ, ಇನ್ನು ಕೆಲವರು ‘ಬಕರಾ’ಗಳಿಂದ ವಸೂಲಿ ಮಾಡುವ ಹಣದಲ್ಲಿ ‘ಪರ್ಸಂಟೇಜ್‌’ ಪಡೆದುಕೊಳ್ಳುತ್ತಾರೆ.

ಒಟಿಪಿ ಶೇರ್‌ ಮಾಡಬೇಡಿ, ಲಿಂಕನ್ನು ಕ್ಲಿಕ್ಕಿಸಲೇ ಬೇಡಿ…

ಸೈಬರ್‌ ವಂಚಕರ ಜಾಲದಿಂದ ನಾಗರಿಕರು ಸುರಕ್ಷತೆ ಕಾಯ್ದುಕೊಳ್ಳುವುದು ಅಗತ್ಯ. ವಂಚಕರು ಒಡ್ಡುವ ಆಮಿಷಗಳಿಗೆ ಮರುಳಾಗದೆ ಹಣಕಾಸು ಸುರಕ್ಷತೆ ಕಾಪಾಡಿಕೊಳ್ಳುವ ಬಗ್ಗೆ ಬೆಂಗಳೂರಿನ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನೀಡುವ ಸಲಹೆಗಳಿವು.

ಯಾರೊಂದಿಗೂ ಬ್ಯಾಂಕ್‌ ವಹಿವಾಟು ಸಂಬಂಧಿತ ಒಟಿಪಿ ಶೇರ್‌ ಮಾಡಬೇಡಿ.

ಲಕ್ಕಿ ಡ್ರಾ, ಉಡುಗೊರೆ ನೀಡುವ ಮೆಸೇಜ್‌ಗಳ ಲಿಂಕ್‌ ಕ್ಲಿಕ್ಕಿಸಬೇಡಿ.

ಟೆಲಿಗ್ರಾಂ ಗ್ರೂಪ್‌ಗಳಲ್ಲಿಅಪರಿಚಿತ ಗ್ರೂಪ್‌ಗಳಿಗೆ ಜಾಯಿನ್‌ ಆಗುವುದು, ಸಂದೇಶಗಳಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ.

ಕ್ರಿಪ್ಟೋ ಕರೆನ್ಸಿ ಹೂಡಿಕೆ, ಅಧಿಕ ಲಾಭಾಂಶದ ಆಮಿಷದ ಕುರಿತು ಎಚ್ಚರವಿರಲಿ.

ಅಪರಿಚಿತರ ಜತೆ ಬ್ಯಾಂಕ್‌ ಸಂಬಂಧಿತ ವಿವರ, ವಹಿವಾಟು ಮಾಹಿತಿ ನೀಡಬೇಡಿ.

ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಅಪರಿಚಿತ ಗ್ರೂಪ್‌ಗಳಿಗೆ ಜಾಯಿನ್‌ ಆಗುವುದು, ಸಂದೇಶಗಳಿಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ.

ಆನ್‌ಲೈನ್‌ನಲ್ಲಿ ಉದ್ಯೋಗ ನೀಡುವ ಸಂದೇಶಗಳನ್ನು ಪುನರ್‌ ಪರಿಶೀಲಿಸಿ.

ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.

ಪ್ರತಿ ಸೆಕೆಂಡ್‌ಗೆ 2222 ಸೈಬರ್‌ ದಾಳಿಗಳು!

ಪ್ರತಿದಿನ 130 ದೇಶಗಳಲ್ಲಿ 7,000 ಕೋಟಿ ಸೈಬರ್‌ ದಾಳಿಗಳು ನಡೆಯುತ್ತವೆ. ಅಂದರೆ, ಪ್ರತಿ ಗಂಟೆಗೆ 80 ಲಕ್ಷ ಸೈಬರ್‌ ದಾಳಿಗಳು ನಡೆಯುತ್ತಿವೆ ಅಥವಾ ಪ್ರತಿ ಸೆಕೆಂಡಿಗೆ ಅಂದಾಜು 2,222 ಸೈಬರ್‌ ದಾಳಿಗಳು ನಡೆಯುತ್ತವೆ.

ಪ್ರತಿವರ್ಷ ಸೈಬರ್‌ ಅಪರಾಧಿಗಳಿಂದಾಗಿ 6,00,000 ಕೋಟಿ ಡಾಲರ್‌ಗಳಷ್ಟು ನಷ್ಟವಾಗುತ್ತಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಪ್ರತಿ ಗಂಟೆಗೆ 5627 ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ ಎನ್ನುತ್ರಾರೆ ಅಂತಾರಾಷ್ಟ್ರೀಯ ಸೈಬರ್‌ ತಜ್ಞ ಉದಯ್‌ಶಂಕರ್‌ ಪುರಾಣಿಕ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button