Belagavi: ಬಸ್ ಕಂಡಕ್ಟರ್ ಮೇಲೆ POCSO ಕೇಸ್ ದಾಖಲು, ಕಣ್ಣೀರಿಟ್ಟ ನಿರ್ವಾಹಕ!

ಹೌದು, ಆ ಅಪ್ರಾಪ್ತ ಬಾಲಕಿಯಿಂದ ನಿರ್ವಾಹಕನ ಮೇಲೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತರದೇ ಎಫ್ ಐ ಆರ್ ಕೂಡ ದಾಖಲು ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಬಸ್ ನಿರ್ವಾಹಕ ಕಣ್ಣೀರಿಟ್ಟಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧನ ಮಾಡಿದ್ದಕ್ಕೆ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆಯ ಠಾಕ್ರೆ ಬಣದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕರವೇ ಕಾರ್ಯಕರ್ತರು ಹಾಗೂ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಅನೆ ನಡೆಸಿದ್ದಾರೆ.
ಕರ್ನಾಟಕದ ಸಾರಿಗೆ ಬಸ್ ಗೆ ಭಗವಾ ಧ್ವಜ ಕಟ್ಟಿ ಉದ್ದಟತನ ಮರೆದಿದ್ದಾರೆ. ಕೊಲ್ಲಾಪುರದಿಂದ ರಾಜ್ಯಕ್ಕೆ ಬರುತ್ತಿದ್ದ KSRTC ಬಸ್ ಗೆ ಧ್ವಜ ಕಟ್ಟಿ ಪುಂಡಾಟ ಮೆರೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಿಪ್ಪಾಣಿ ಮಾರ್ಗವಾಗಿ ಕೊಲ್ಲಾಪುರಕ್ಕೆ ತೆರಳುವ KSRTC ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದವರು ಎಂದು ತಿಳಿದುಬಂದಿದೆ. ನಿರ್ವಾಹಕನ ಮೇಲಿನ ಹಲ್ಲೆಗೆ ಕನ್ನಡ ಪರ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಅವರನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿದ್ದಾರೆ.
ಹಲ್ಲೆಗೆ ಕಾರಣವೇನು?
ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದ ಹೊರವಲಯದಲ್ಲಿ ಬಸ್ ನಿರ್ವಾಹಕರೊಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿತ್ತು. ಯುವತಿಯೊಬ್ಬರಿಗೆ ಆಧಾರ್ ಕಾರ್ಡ್ ಕೇಳಿದ್ದಕ್ಕೆ ಸಿಟ್ಟಿಗೆದ್ದ ಯುವಕರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಬಸ್ ನಿರ್ವಾಹಕರು ಯುವತಿಗೆ ಕನ್ನಡದಲ್ಲಿ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಆದರೆ ಯುವತಿ ಜೊತೆಗಿದ್ದ ಯುವಕನೋರ್ವ ನಿರ್ವಾಹಕರ ಜೊತೆಗೆ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಯುವಕರು ಹಾಗೂ ಬಸ್ ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಸ್ನೇಹಿತರನ್ನು ಕರೆಸಿ ನಿರ್ವಾಹಕನ ಮೇಲೆ ಹಲ್ಲೆ
ಮಾತಿಗೆ ಮಾತು ಬೆಳೆದಂತೆ, ಯುವಕ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾನೆ. ಯುವತಿ ಜೊತೆಗೆ ಮರಾಠಿಯಲ್ಲಿ ಮಾತನಾಡುವಂತೆ ನಿರ್ವಾಹಕನ ಜೊತೆಗೆ ಯುವಕ ಕಿರಿಕ್ ಮಾಡಿದ್ದಾನೆ. ನನಗೆ ಮರಾಠಿ ಬರೋದಿಲ್ಲ, ಕನ್ನಡದಲ್ಲೇ ಮಾತನಾಡ್ತೀನಿ ಎಂದಿದ್ದಕ್ಕೆ ಯುವಕ ಬಸ್ ನಿರ್ವಾಹಕ ಮಹಾದೇವಪ್ಪ ಜೊತೆ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಸ್ನೇಹಿತರನ್ನು ಕರೆಸಿ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮರಾಠಿ ಪುಂಡ ಯುವಕನ ದೌರ್ಜನ್ಯದಿಂದ ಬಸ್ ಕಂಡಕ್ಟರ್ ಮಹಾದೇವಪ್ಪ ಗಾಯಗೊಂಡಿದ್ದಾರೆ. ಹಲ್ಲೆಗೊಳಗಾದ ಬಸ್ ನಿರ್ವಾಹಕ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಘಟನೆ ಸಂಬಂಧ ಮಾರಿಹಾಳ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.


