Lokayukta Raid: ರಾಜ್ಯದ ಹಲವೆಡೆ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ಭ್ರಷ್ಟರ ಮನೆ ಬಾಗಿಲು ತಟ್ಟಿದ ಲೋಕಾಯುಕ್ತ ಅಧಿಕಾರಿಗಳು

ಬೆಂಗಳೂರು ಮಾರ್ಚ್ 6: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಮನೆ ಬಾಗಿಲು ತಟ್ಟಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಂಗಳೂರು, ಕೋಲಾರ, ದಾವಣಗೆರೆ, ತುಮಕೂರು, ಬಾಗಲಕೋಟೆ ಹಾಗೂ ಕಲಬುರಗಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಹೌದು… ಇಂದು ಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ತಂಡ ಭ್ರಷ್ಟರಿಗೆ ಶಾಕ್ ಕೊಟ್ಟಿದೆ. ಅಧಿಕಾರಿಗಳು ಬೆಂಗಳೂರಿನ ವಿವಿದೆಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಿಬಿಎಂಪಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಹೆಚ್.ಪಿ ಕಲ್ಲೇಶಪ್ಪ ಹಾಗೂ ಬೆಂಗಳೂರಿನ ಜಿಆರ್‌ಪಿಎ ಚೀಫ್ ಎಂಜಿನಿಯರ್ ನಂಜುಂಡಪ್ಪ ಅವರ ಮನೆಗಳ ಮೇಲೆ ಇಂದು ಲೋಕಾಯುಕ್ತರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಭಾರೀ ಮೌಲ್ಯದ ಚಿನ್ನಾಭರಣ, ಕೋಟ್ಯಾಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇನ್ನೂ ಲೋಕೋಪಯೋಗಿ ಚೀಫ್ ಇಂಜಿನಿಯರ್ ಮನೆ ಮೇಲೆ ದಾಳಿ ಮಾಡಲಾಗಿದ್ದು, ಕಲಬುರಗಿಯಲ್ಲಿರುವ ಅವರ ಮನೆ ಸೇರಿದಂತೆ ಅವರಿಗೆ ಸಂಬಂಧಿಸಿದ ವಿವಿದೆಡೆ ದಾಳಿ ಮಾಡಲಾಗಿದೆ. ಜೊತೆಗೆ ಲೋಕೋಪಯೋಗಿ ಇಲಾಖೆ ಎಫ್‌ಡಿಸಿ ಮಲ್ಲೇಶ್ ಅವರ ಬಾಗಲಕೋಟೆಯ ಬೀಳಗಿಯಲ್ಲಿರುವ ಮನೆ ಹಾಗೂ ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಲ್ಲದೆ ತುಮಕೂರಿನ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಜಗದೀಶ್ ಮನೆ ಮೇಲೂ ದಾಳಿ ಮಾಡಲಾಗಿದೆ. ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ ನೇತೃತ್ವದಲ್ಲಿ ದಾವಣಗೆರೆಯ ಫುಡ್ ಸೇಪ್ಠಿ ಮತ್ತು ಕ್ವಾಲಿಟಿ ಯುನಿಟ್ ಹೆಲ್ತ್ ಡಿಪಾರ್ಟ್‌ಮೆಂಟ್‌ನ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ.


