ಮಾವಿನಹಣ್ಣು ಖರೀದಿಗೂ ಮುನ್ನ ಎಚ್ಚರ! ಮಾವನ್ನು ಪರಿಶೀಲಿಸುವುದೇಗೆ? ಇಲ್ಲಿದೆ ನೋಡಿ ಮಾಹಿತಿ

ಮಾವಿನ ಹಣ್ಣು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮಾವಿನ ಹಣ್ಣಿನ ಸೀಸನ್ನಲ್ಲಿ ಜನರು ವಿವಿಧ ಬಗೆಯ ಮಾವನ್ನು ಚಪ್ಪರಿಸುತ್ತಾರೆ. ಆದರೆ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಹಣ್ಣಾಗಿಸಿದ ಮಾವು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಎಂಬುವುದು ನಿಮಗೆ ಗೊತ್ತಾ?
ಮಾವು ಖರೀದಿಸುವ ಮೊದಲು ಮಾವಿನ ಹಣ್ಣನ್ನು ಕೃತಕವಾಗಿ ಹಣ್ಣಾಗಿಸಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡುವುದೇಗೆ ಎಂಬುದನ್ನು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳನ್ನು ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಈ ರಾಸಾಯನಿಕಗಳಿಂದ ತುಂಬಿರುವ ಮಾವಿನಹಣ್ಣು ನಿಮ್ಮ ಆರೋಗ್ಯದ ಮೇಲೆ ನಿಧಾನವಾಗಿ ಪರಿಣಾಮ ಬೀರಬಹುದು. ಬಹುತೇಕ ಎಲ್ಲಾ ಆರೋಗ್ಯ ತಜ್ಞರು ಬೇಸಿಗೆಯಲ್ಲಿ ಸಾಧ್ಯವಾದಷ್ಟು ಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳಷ್ಟು ಹಣ್ಣುಗಳನ್ನು ನಿಮ್ಮ ಮನೆಗೆ ತರುತ್ತೀರಿ. ಆದರೆ ನೀವು ಮಾರುಕಟ್ಟೆಯಿಂದ ಖರೀದಿಸುವ ಹಣ್ಣುಗಳು ನಿಜವಾಗಿಯೂ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಅಥವಾ ಅವುಗಳನ್ನು ರಾಸಾಯನಿಕಗಳಿಂದ ಸಂಸ್ಕರಿಸಲಾಗಿದೆಯೇ ಎಂದು ನೀವು ಎಂದಾದರೂ ತಿಳಿದಿದ್ದೀರಾ.
ಮಾರುಕಟ್ಟೆಗಳಲ್ಲಿ ಕೇಸರ್, ಲ್ಯಾಂಗ್ರಾ, ತೋತಾಪುರಿಯಿಂದ ಬಾದಾಮ್ನಂತಹ ಹಲವು ಬಗೆಯ ಮಾವಿನಹಣ್ಣುಗಳು ಲಭ್ಯವಿದೆ. ಜನರು ಮಾವಿನ ಹಣ್ಣುಗಳನ್ನು ಬಹಳ ಉತ್ಸಾಹದಿಂದ ಸವಿಯುತ್ತಿದ್ದಾರೆ, ಇತ್ತೀಚೆಗೆ ರಾಸಾಯನಿಕಗಳಿಂದ ಹಣ್ಣಾದ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ವೇಗವಾಗಿ ಸರಬರಾಜು ಆಗುತ್ತಿವೆ. ಹಾಗಾದರೆ ಮಾವಿನ ಮರದಲ್ಲಿ ಹಣ್ಣಾದ ಮಾವಿನಹಣ್ಣುಗಳು ಮತ್ತು ರಾಸಾಯನಿಕಗಳಿಂದ ಹಣ್ಣಾದ ಮಾವಿನಹಣ್ಣುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಹೇಗೆ ಎಂದು ತಿಳಿಯೋಣ.
ರಾಸಾಯನಿಕ ಮಾವಿನಿಂದಾಗುವ ಪರಿಣಾಮ:
ಮಾರುಕಟ್ಟೆಯಲ್ಲಿ ಮಾವಿನಹಣ್ಣಿಗೆ ಬೇಡಿಕೆ ಹೆಚ್ಚುತ್ತಿದ್ದು, ಹಸಿ ಮಾವಿನ ಹಣ್ಣುಗಳನ್ನು ಚುಚ್ಚುಮದ್ದು ಹಾಕುವ ಮೂಲಕ ಬೇಗನೆ ಹಣ್ಣಾಗಿಸಲಾಗುತ್ತಿದೆ. ಇದಕ್ಕೆ ಕ್ಯಾಲ್ಸಿಯಂ ಕಾರ್ಬೈಡ್ ಸೇರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಚರ್ಮದ ಸಮಸ್ಯೆ, ಉಸಿರಾಟದ ತೊಂದರೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಮಾವನ್ನು ಪರಿಶೀಲಿಸುವುದೇಗೆ?
1)ನೀವು ಮಾರುಕಟ್ಟೆಯಿಂದ ಮಾವಿನಹಣ್ಣುಗಳನ್ನು ಖರೀದಿಸಲು ಹೋದರೆ, ಅವುಗಳ ಬಣ್ಣವನ್ನು ನೋಡಲು ಮರೆಯಬೇಡಿ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳಲ್ಲಿ ಹಸಿರು ಕಲೆಗಳು ಕಾಣಿಸಿಕೊಳ್ಳುತ್ತವೆ, ಆದರೆ ರಾಸಾಯನಿಕಗಳಿಂದ ಮಾಗಿದ ಮಾವಿನ ಹಣ್ಣುಗಳಲ್ಲಿ ಸಣ್ಣ ಕಪ್ಪು-ಕಂದು ಕಲೆಗಳು ಕಾಣಿಸಿಕೊಳ್ಳುತ್ತವೆ.
2)ನೈಸರ್ಗಿಕವಾಗಿ ಮಾಗಿದ ಮಾವನ್ನು ಪತ್ತೆ ಮಾಡಲು ಮಾವನ್ನು ನೀರಿನಲ್ಲಿ ನೆನೆಸಿ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ನೀರಿನಲ್ಲಿ ಮುಳುಗುತ್ತವೆ, ಆದರೆ ರಾಸಾಯನಿಕಗಳನ್ನು ಬಳಸಿದ ಮಾವಿನ ಹಣ್ಣುಗಳು ನೀರಿನ ಮೇಲೆ ತೇಲುತ್ತವೆ.
3)ಮಾವಿನಹಣ್ಣುಗಳನ್ನು ಖರೀದಿಸುವಾಗ, ಜನರು ಹೆಚ್ಚಾಗಿ ಅವುಗಳನ್ನು ಬೆರಳುಗಳಿಂದ ಒತ್ತಲು ಪ್ರಯತ್ನಿಸುತ್ತಾರೆ. ಮೃದುವಾದ ಮಾವಿನಹಣ್ಣುಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಅಂತಹ ಮಾವಿನ ಹಣ್ಣು ಕೆಲವು ಸ್ಥಳಗಳಲ್ಲಿ ಮೃದುವಾಗಿದ್ದು, ಮತ್ತು ಇತರ ಸ್ಥಳಗಳಲ್ಲಿ ಗಟ್ಟಿಯಾಗಿದ್ದರೆ, ಅಂತಹ ಮಾವನ್ನು ಖರೀದಿಸಬೇಡಿ.
4)ಮಾವಿನ ಆಕಾರವನ್ನು ನೋಡಿ, ಅದು ಕೊಂಬೆಯಲ್ಲೇ ಹಣ್ಣಾಗಿದೆಯೇ ಅಥವಾ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿದೆಯೇ ಎಂದು ನೀವು ಹೇಳಬಹುದು. ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವಿನ ಹಣ್ಣುಗಳು ಸಾಮಾನ್ಯ ಮಾವಿನ ಹಣ್ಣುಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಮಾರುಕಟ್ಟೆಯಲ್ಲಿ ಅಂತಹ ಮಾವು ಕಂಡರೆ, ಅದನ್ನು ಖರೀದಿಸಲೇಬೇಡಿ ಯಾವಾಗಲೂ ಮಧ್ಯಮ ಗಾತ್ರದ ಮಾವಿನ ಹಣ್ಣುಗಳನ್ನು ಖರೀದಿಸಿ.