ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಗೌಸ್ ಶಾಹ್ ಖಾದ್ರಿ ದರ್ಗಾಹ್’ದ ಸಂದಲ್ ಉರುಸು ಕಾರ್ಯಕ್ರಮ
ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಹಿರೇಬಾಗೇವಾಡಿಯ ಗೌಸ್ ಶಾಹ್ ಖಾದ್ರಿ ದರ್ಗಾಹ್ ಉರುಸ್…

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಗೌಸ್ ಶಾಹ್ ಖಾದ್ರಿ ದರ್ಗಾಹ್’ದ ಸಂದಲ್ ಉರುಸು ಕಾರ್ಯಕ್ರಮ ಹಿಂದೂ ಮುಸ್ಲಿಂ ಬಾಂಧವರ ಉಪಸ್ಥಿತಿಯಲ್ಲಿ ಅತ್ಯಂತ ಉತ್ಸಾಹದಲ್ಲಿ ಆರಂಭಗೊಂಡಿದೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಗೌಸ್ ಶಾಹ್ ಖಾದ್ರಿ ದರ್ಗಾಹ್’ದ ಸಂದಲ್ ಉರುಸು ಕಾರ್ಯಕ್ರಮ ಬುಧವಾರ ರಾತ್ರಿಯಿಂದ ಆರಂಭಗೊಂಡಿದೆ. ರಾತ್ರಿ ಸಂದಲ್ ಮೆರವಣಿಗೆ ನಡೆಯಿತು. ಇಂದು ಗುರುವಾರ ಮುಂಜಾನೆ ಗೌಸ್ ಶಾಹ್ ಖಾದ್ರಿ ಅವರಿಗೆ ಗಂಧವನ್ನು ಅರ್ಪಿಸಲಾಯಿತು. ಗುರುವಾರ ರಾತ್ರಿ ಮುರಾದ್ ಆತೀಶ್ ಮತ್ತು ಅಮೀರ್ ಅಕ್ಬರ್ ಹಾಗೂ ಶುಕ್ರವಾರದಂದು ರಾತ್ರಿ ಜುನೇದ್ ಸುಲ್ತಾನಿ ಮತ್ತು ಶಬ್ಬೀರ್ ಸದಾಕತ್ ಅವರ ಕವ್ವಾಲಿ ಗಾಯನ ಕಾರ್ಯಕ್ರಮ ನಡೆಯಲಿದೆ.

ಈ ಕುರಿತು ಮಾಹಿತಿಯನ್ನು ನೀಡಿದ, ದರ್ಗಾದ ಅಶ್ರಫ್ ಪೀರಾ ಅವರು ಗೌಸ್ ಶಾಹ್ ಖಾದ್ರಿ ಅವರ ದರ್ಗಾದ ಉರುಸನ್ನು ಹಿರೇಬಾಗೇವಾಡಿಯಲ್ಲಿ ಹಬ್ಬದಂತೆ ಹಿಂದೂ ಮುಸ್ಲಿಂ ಬಾಂಧವರೂ ಕೂಡಿಕೊಂಡು ಆಚರಣೆ ಮಾಡಲಾಗುತ್ತದೆ. ಇದು ಹಿಂದೂ ಮುಸ್ಲಿಂ ಬಾಂಧವರ ಶ್ರದ್ಧಾಸ್ಥಾನವಾಗಿದೆ. ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧೆಡೆಯ, ಮಹಾರಾಷ್ಟ್ರ ಮತ್ತು ಗೋವಾ ಸೇರಿದಂತೆ ಹಲವೆಡೆಯ ಭಕ್ತರು ಪ್ರತಿ ಬಾರಿಯೂ ಇಲ್ಲಿಗೆ ಆಗಮಿಸುತ್ತಾರೆ ಎಂದರು.

ಇದೇ ವೇಳೆ ಅವರು ಪೆಹಲ್’ಗಾಮ್’ನ ಉಗ್ರವಾದಿಗಳ ದಾಳಿಯನ್ನು ಖಂಡಿಸಿ, ಇಸ್ಲಾಂ ಇಂತಹ ಕೃತ್ಯಗಳನ್ನು ಒಪ್ಪುವುದಿಲ್ಲ. ಹಿಂಸಾಚಾರ ಇಸ್ಲಾಂ ಧರ್ಮದ ವಿರುದ್ಧವಾಗಿದೆ. ಭಾರತದ ಅಭಿವೃದ್ಧಿಗೆ ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರೂ ಒಂದಾಗಿರಬೇಕು. ಕಟ್ಟರವಾದಿಗಳ ಕೃತ್ಯವನ್ನು ನಾವು ಖಂಡಿಸುತ್ತೇವೆ. ದೇಶದಲ್ಲಿ ಶಾಂತಿ ಸೌಹಾರ್ದತೆಯಿಂದ ಸಹಬಾಳ್ವೆಯನ್ನು ನಡೆಸಬೇಕು. ಆಧ್ಯಾತ್ಮಕತೆಯನ್ನು ಸಾರುವ ಸೂಫಿ ಸಂತರ ಸಂದೇಶಗಳನ್ನು ಅರಿತು ಭಾರತದಲ್ಲಿ ಎಲ್ಲರೂ ಸಹಬಾಳ್ವೆಯನ್ನು ನಡೆಸಬೇಕೆಂದರು.
ಶನಿವಾರ ಮತ್ತು ಭಾನುವಾರದಂದು ಎರಡು ದಿನಗಳ ಕಾಲ ನಾಟಕ ಮತ್ತು ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಈ ವೇಳೆ ಸಾವಿರಾರು ಭಕ್ತರು ಉರುಸ್’ನಲ್ಲಿ ಭಾಗಿಯಾಗಿದ್ಧರು.


