ಹುಕ್ಕೇರಿ: ಆರ್‌ಎಫ್‌ಒ ಭಾರತಿ ನಂದಿಹಳ್ಳಿಗೆ ಅರಣ್ಯ ಇಲಾಖೆಯ ಕಾರ್ಯಕ್ರಮಗಳ ಕುರಿತು ಲಿಖಿತ ಮಾಹಿತಿ ನೀಡುವಂತೆ ಸೂಚಿಸಿ ನೋಟಿಸ್ ಜಾರಿ

ಹುಕ್ಕೇರಿ: ಇಲ್ಲಿನ ಸಾಮಾಜಿಕ ಅರಣ್ಯ ಹುಕ್ಕೇರಿ ವಲಯ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ತಾಲೂಕು ಪಂಚಾಯಿತಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ವಲಯ ಅರಣ್ಯ ಅಧಿಕಾರಿ ಭಾರತಿ ನಂದಿಹಳ್ಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಗ್ರಾಮೀಣ ಜನರಿಗೆ ವರದಾನ ಎನಿಸಿರುವ ಮಹತ್ವಾಕಾಂಕ್ಷಿ ನರೇಗಾ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಬಳಕೆ ಮಾಡದೇ ಇರುವುದು. 2024-25ನೇ ಸಾಲಿನಲ್ಲಿ ಸಾಮಾಜಿಕ ಅರಣ್ಯ ಯೋಜನೆಯ ನೆಡುತೋಪು ನಿರ್ಮಾಣದಡಿ ನೆಡಲಾದ ಸಸಿಗಳು ನಾಶವಾಗಿರುವುದು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಲಕ್ಷಾಂತರ ರೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅರಣ್ಯ ವಲಯದ ಆರ್‌ಎಫ್‌ಒ ಭಾರತಿ ನಂದಿಹಳ್ಳಿ ಅವರಿಗೆ ಕಾರಣ ಕೇಳಿ ತಾಪಂ ಇಒ ಟಿ.ಆರ್.ಮಲ್ಲಾಡದ ಅವರು ನೋಟಿಸ್ ಜಾರಿಗೊಳಿಸಿದ್ದಾರೆ.
ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯಕ್ರಮಗಳ ಕುರಿತು ಲಿಖಿತ ಮಾಹಿತಿ ನೀಡುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಲಾಗಿದೆ. ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ಸಮಗ್ರ ವಿಸ್ಕೃತ ವರದಿಯನ್ನು ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ಮಲ್ಲಾಡದ ತಿಳಿಸಿದ್ದಾರೆ.


