ಗೃಹಲಕ್ಷ್ಮೀ ಹಣ ಪಡೆಯುವವರಿಗೆ ಕಾರ್ಮಿಕ ಕಾರ್ಡ್ ನೀಡುತ್ತಿಲ್ಲ.ಕಾರ್ಮಿಕ ಕಾರ್ಡ್ ಇದ್ದ ಕುಟುಂಬಕ್ಕೆ 2000 ರೂ. ಗೃಹಲಕ್ಷ್ಮಿ ಹಣ ಬರಲ್ವಾ? ಸ್ಪಷ್ಟನೆ ನೀಡಿದ ಲಕ್ಷ್ಮಿ ಹೆಬ್ಬಾಳಕರ್

ಬೆಂಗಳೂರು, ಜುಲೈ 09: ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನ ನೀಡಿದೆ. ಮಾತು ಕೊಟ್ಟಂತೆ ಹಂತ ಹಂತವಾಗಿ ಐದು ಗ್ಯಾರಂಟಿ ಯೋಜನೆಯನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಇನ್ನೂ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂಪಾಯಿಯನ್ನ ಸರ್ಕಾರ ಜಮಾ ಮಾಡುತ್ತಿದ್ದು, ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ದಿನಕ್ಕೊಂದು ನಿಯಮಗಳು ಜಾರಿಯಾಗುತ್ತಿರುವುದು ರಾಜ್ಯದ ಮಹಿಳೆಯರಿಗೆ ದೊಡ್ಡ ತಲೆನೋವಾಗಿದೆ.
ಗೃಹಲಕ್ಷ್ಮೀ ಹಣ ಪಡೆಯುವವರಿಗೆ ಕಾರ್ಮಿಕ ಕಾರ್ಡ್ ನೀಡುತ್ತಿಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಉತ್ತರಿಸಿ, ಗೃಹಲಕ್ಷ್ಮಿ ಯೋಜನೆಗೆ ಕಾರ್ಮಿಕರು ಒಳಪಟ್ಟಿದ್ದಾರೆ. ಯಾರಿಗಾದರೂ ತಪ್ಪಿದ್ದರೆ ಆ ಬಗ್ಗೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ಜೊತೆಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಭೇಟಿ ಕೊಡುವುದು ಹೊಸದೆನಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಆಡಳಿತಾತ್ಮಕ ವಿಷಯವಾಗಿ ಕೇಂದ್ರ ಸಚಿವರನ್ನು ಭೇಟಿಯಾಗಲು ಹೋಗಿದ್ದಾರೆ. ಇಲಾಖೆ ವಿಷಯವಾಗಿ ನಾನು ಕೂಡ ದೆಹಲಿಗೆ ಹೋಗುತ್ತಾ ಇರುತ್ತೇನೆ. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಸರ್ಕಾರ ಬದಲಾವಣೆ, ಮುಖ್ಯಮಂತ್ರಿಗಳ ಬದಲಾವಣೆ ವಿಷಯಗಳನ್ನಷ್ಟೇ ಸುಖಾಸುಮ್ಮನೆ ಮಾತನಾಡುತ್ತಿರುತ್ತಾರೆ. ನಮ್ಮ ಪಕ್ಷದಲ್ಲಿ ಎಲ್ಲದಕ್ಕೂ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ನಮ್ಮ ಶಾಸಕ ಮಿತ್ರರು ಭೇಟಿಯಾಗುವುದು ಹೊಸದೆನಲ್ಲ. ಇದು ನಿರಂತರ ಪ್ರತಿಕ್ರಿಯೆ. ಈ ಬಾರಿ ಸ್ಪಲ್ವ ತಡವಾಗಿದೆ ಅಷ್ಟೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉತ್ತರಿಸಿದರು. ಮೊಟ್ಟೆ ಬಿಲ್ ಹಾಗೂ ಅಂಗನವಾಡಿ ಕಟ್ಟಡಗಳ ಬಾಡಿಗೆ ಕಟ್ಟಿಲ್ಲ ಎಂಬುದರ ಕುರಿತು ಉತ್ತರಿಸಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದೇ ನಮ್ಮ ಗುರಿ. ಹಾಲಿನ ಪೌಡರ್ ಬಿಲ್ ಆಗಲಿ, ಮೊಟ್ಟೆ ಬಿಲ್ ಆಗಲಿ ಆಯಾ ತಿಂಗಳು ವಾಪತಿಸಿಕೊಂಡು ಬರಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಹೇಳಿದರು.