ಬೆಂಗಳೂರು-ಬೆಳಗಾವಿ ಮಾರ್ಗ ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ, ರೈಲಿನ ಸಂಖ್ಯೆ, ವೇಳಾಪಟ್ಟಿ, ಟ್ರಿಪ್ ವಿವರ ಇಲ್ಲಿದೆ.

ಬೆಂಗಳೂರು, ಜುಲೈ 30: ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣಕ್ಕೆ ನೈಋತ್ಯ ರೈಲ್ವೆಯು 2025ರ ಆಗಸ್ಟ್ ನಿಂದ SMVT ಬೆಂಗಳೂರು ರೈಲು ನಿಲ್ದಾಣದಿಂದ ಉತ್ತರ ಕರ್ನಾಟಕದ ಈ ಜಿಲ್ಲೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಗೆ ಆರಂಭಿಸಲಿದೆ.
ಈ ರೈಲಿನ ಸಂಖ್ಯೆ, ವೇಳಾಪಟ್ಟಿ, ಟ್ರಿಪ್ ವಿವರ ಇಲ್ಲಿದೆ.
ಹೆಚ್ಚುತ್ತಿರುವ ಪ್ರಯಾಣ ಬೇಡಿಕೆಯನ್ನು ಪೂರೈಸಲು ಹಾಗೂ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ನೈಋತ್ಯ ರೈಲ್ವೆ SMVT ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು (06551) ಸೇವೆ ಆರಂಭಿಸುತ್ತಿದೆ. ಈ ರೈಲಿನ ಕಾರ್ಯಾಚರಣೆ ಆಗಸ್ಟ್ ನಲ್ಲಿ ಪ್ರತಿ ದಿಕ್ಕಿನಲ್ಲಿ ನಾಲ್ಕು ಟ್ರಿಪ್ ಚಲಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು SMVT-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ನೋಡುವುದಾದರೆ, ಈ ರೈಲು (06551) SMVT ಬೆಂಗಳೂರಿನಿಂದ ಆಗಸ್ಟ್ 7, 9, 14 ಮತ್ತು 16 ರಂದು ಸಂಜೆ 7:00 ಗಂಟೆಗೆ ಪ್ರಯಾಣ ಆರಂಭಿಸುತ್ತದೆ. ಮರುದಿನ ಬೆಳಗ್ಗೆ 8:25 ಗಂಟೆಗೆ ಬೆಳಗಾವಿ ರೈಲು ನಿಲ್ದಾಣ ತಲುಪುತ್ತದೆ.
ಇದೇ ಎಕ್ಸ್‌ಪ್ರೆಸ್ ರೈಲು ಮರಳಿ ಬೆಳಗಾವಿ ರೈಲು ನಿಲ್ದಾಣದಿಂದ (06552) ಪ್ರಯಾಣವನ್ನು ಆಗಸ್ಟ್ 8, 10, 15 ಮತ್ತು 17 ರಂದು ಸಂಜೆ 5:30 ಗಂಟೆಗೆ ಆರಂಭಿಸುತ್ತದೆ. ಮಾರನೇ ದಿನ ಬೆಳಗ್ಗೆ 5:00 ಗಂಟೆಗೆ ಸರ್ ಎಂ ವಿಶೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ಇಲ್ಲಿಗೆ ಆಗಮಿಸುತ್ತದೆ.
ನಿಲುಗಡೆ ನಿಲ್ದಾಣಗಳು ಯಾವುವು?
ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಎರಡೂ ಬದಿಯ ಸಂಚಾರದ ವೇಳೆ ‘ಚಿಕಬಾಣವಾರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೋಂಡಾ ಮತ್ತು ಖಾನಾಪುರ’ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಆಯಾ ಜಿಲ್ಲೆಗಳ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
20 ಬೋಗಿಗಳ ವಿಶೇಷ ರೈಲು
ಬೆಂಗಳೂರು SMVT-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ. 2 ಎಸಿ ಟು-ಟೈರ್ ಕೋಚ್‌ಗಳು, 3 ಎಸಿ ಥ್ರೀ ಟೈರ್, 10 ಸ್ಲೀಪರ್ ಕ್ಲಾಸ್ ಕೋಚ್‌ಗಳು, 3 ಸಾಮಾನ್ಯ ಎರಡನೇ ದರ್ಜೆಯ ಕೋಚ್‌ಗಳು, ವಿಕಲಚೇತನ ಪ್ರಯಾಣಿಕರ ವಿಭಾಗಗಳು ಹಾಗೂ 2 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳನ್ನು ಹೊಂದಿರಲಿದೆ. ಇದು ತಾತ್ಕಾಲಿಕ ರೈಲು ಸೇವೆಯಾಗಿದ್ದು, ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೊರೆ ಕಡಿಮೆ ಮಾಡಲಿದೆ. ಕರ್ನಾಟಕದ ಎರಡು ಬದಿಗೆ ಸಂಚರಿಸುವ ಹತ್ತಾರು ಜಿಲ್ಲೆಗಳಿಗೆ ಸಹಾಯವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.