ಬೆಳಗಾವಿ: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮುಷ್ಕರದ ಬಿಸಿ

ಬೆಳಗಾವಿ: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮುಷ್ಕರದ ಬಿಸಿ ತಟ್ಟಿದ್ದು, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ವ್ಯತ್ಯಯವಾಗಿದೆ. ಶೇ.30ರಷ್ಟು ಬಸ್ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿವೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಹಳಷ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಶೇ.10ರಷ್ಟು ಬಸ್ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿದ್ದವು. ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಹುದ್ದಾರ ಸೇರಿ ಹಿರಿಯ ಅಧಿಕಾರಿಗಳು ಚಾಲಕ, ನಿರ್ವಾಹಕರನ್ನು ಮನವೊಲಿಸಿದ ಪರಿಣಾಮ ಸದ್ಯ ಶೇ.30ರಷ್ಟು ಬಸ್ಗಳು ಓಡಾಡಲು ಆರಂಭಿಸಿವೆ.
ಬೆಳಗಾವಿ ವಿಭಾಗದಲ್ಲಿ ನಿತ್ಯ 700ಕ್ಕೂ ಅಧಿಕ, ಚಿಕ್ಕೋಡಿ ವಿಭಾಗದಲ್ಲಿ 668 ಬಸ್ಗಳ ಓಡಾಟ ಇತ್ತು. ಎರಡು ಕಡೆಗಳಲ್ಲಿ 4300ಕ್ಕೂ ಅಧಿಕ ಜನ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಎರಡೂ ಕಡೆ ಶೇ.30ರಷ್ಟು ಮಾತ್ರ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಒಂದಿಷ್ಟು ಸಿಬ್ಬಂದಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಸುಮ್ಮನಾಗಿದ್ದಾರೆ.
ಬಹುತೇಕ ಪ್ರಯಾಣಿಕರು ಎರಡು ಗಂಟೆಗೂ ಅಧಿಕ ಕಾಲ ಬಸ್ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಸಿಟಿ ಬಸ್, ಗ್ರಾಮೀಣ ಪ್ರದೇಶ, ಅಂತರ ಜಿಲ್ಲೆ, ಅಂತಾರಾಜ್ಯಗಳಿಗೆ ಬೆರಳಣಿಕೆಯಷ್ಟು ಬಸ್ಗಳು ಮಾತ್ರ ಸಂಚರಿಸುತ್ತಿವೆ. ಇದರಿಂದಾಗಿ ಗೋವಾ, ಮಹಾರಾಷ್ಟ್ರ ಸೇರಿ ವಿವಿಧೆಡೆ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದಾರೆ.
ದಾಂಡೇಲಿಗೆ ಹೋಗುತ್ತಿದ್ದ ಪ್ರಯಾಣಿಕ ಅವಿನಾಶ್ ಎಂಬವರು ಈಟಿವಿ ಭಾರತ ಜೊತೆಗೆ ಮಾತನಾಡಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿ ಗ್ಯಾರಂಟಿ ಯೋಜನೆ ಕೊಡಬಾರದಿತ್ತು. ಇದರಿಂದಾಗಿಯೇ ಈ ಪರಿಸ್ಥಿತಿ ಉದ್ಭವಿಸಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಈ ಸರ್ಕಾರ ಸರಿ ಇಲ್ಲ. ತಕ್ಷಣ ಗ್ಯಾರಂಟಿಗಳನ್ನು ಬಂದ್ ಮಾಡಬೇಕು. ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ರಶ್ಮಿ ಎನ್ನುವರು ಮಾತನಾಡಿ, ನಾನು ಬೈಲಹೊಂಗಲಕ್ಕೆ ಹೋಗಬೇಕು. ಕಳೆದ ಒಂದು ಗಂಟೆಯಿಂದ ಬಸ್ ಬಿಡುತ್ತಿಲ್ಲ. ಬೇರೆ ಕಡೆ ಬಸ್ ಬಿಡುತ್ತಿದ್ದರು. ಹಾಗಾಗಿ, ಬಂದೆ. ಇಲ್ಲಿ ನೋಡಿದರೆ ಬಸ್ ಬಿಡಲ್ಲ ಅಂತಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಾರಿಗೆ ನೌಕರರ ಬೇಡಿಕೆ ಈಡೇರುವ ಕೆಲಸ ಮಾಡಬೇಕು. ಜನರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.