LOKAYUKTA RAID : ಹಲವು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಲೋಕಾ ದಾಳಿ – ಭ್ರಷ್ಟರಿಗೆ ಡವಡವ!

ಬೆಂಗಳೂರು : ಲೋಕಾಯುಕ್ತ (Lokayukta raid) ಮಂಗಳವಾರ ಮುಂಜಾನೆ ಭ್ರಷ್ಟ ಅಧಿಕಾರಿಗಳಿಗೆ ಏಕಾಏಕಿ ಶಾಕ್ ಕೊಟಿದ್ದು, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ, ಭ್ರಷ್ಟಾಚಾರ, ಅಕ್ರಮ ಹಣದ ವಹಿವಾಟು ಸೇರಿದಂತೆ ಹಲವು ಆರೋಪಗಳ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆನ್ನಲಾಗಿದೆ.
ಚಿತ್ರದುರ್ಗದಲ್ಲಿ ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಚಂದ್ರಕಾಂತ್ ಮನೆಯ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾವ್, ಡಿವೈಎಸ್‌ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಚಂದ್ರಕಾಂತ್ ಅವರ ಎರಡು ಮನೆ, ಕೃಷಿ ಇಲಾಖೆ ಕಚೇರಿ ಹಾಗೂ ಅವರ ಇತರೆ ಆಸ್ತಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ದಾವಣಗೆರೆಯಲ್ಲಿ ಕೆಆರ್‌ಐಡಿಎಲ್ ಸಹಾಯಕ ಎಂಜಿನಿಯರ್ ಜಗದೀಶ್ ನಾಯ್ಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಎಸ್‌ಡಿಎ ನಡುವಿನ ಮನೆ ಎಂಬುವವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾವಣಗೆರೆ ಎಸ್‌ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಇವರಿಬ್ಬರ ಮೇಲೆ ಭ್ರಷ್ಟಾಚಾರದ ಆರೋಪವಿತ್ತು ಎನ್ನಲಾಗಿದೆ.


