Local News
ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ: 620 ಚೀಲ ಗೋವಿನಜೋಳ ಸುಟ್ಟು ಭಸ್ಮ

ಬೆಳಗಾವಿ: ಚಲಿಸುತ್ತಿದ್ದ ಲಾರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ನೂರಾರು ಚೀಲ ಗೋವಿನಜೋಳ ಸಂಪೂರ್ಣ ಸುಟ್ಟ ಕರಕಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಭೀಕರ ಅಗ್ನಿ ದುರಂತ ನಡೆದಿದೆ. ನರಗುಂದದಿಂದ ಬೆಳಗಾವಿ ಕಡೆಗೆ 620 ಚೀಲ ಗೋವಿನಜೋಳ ತುಂಬಿಕೊಂಡು ಬರುತ್ತಿದ್ದ ಟ್ರಕ್, ಬೈಲಹೊಂಗಲ ತಾಲೂಕಿನ ಯರಡಾಲ ಕ್ರಾಸ್ ಬಳಿ ಬರುತ್ತಿದ್ದಂತೆ ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಚಾಲಕ ಲಾರಿಯಿಂದ ಕೆಳಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬೈಲಹೊಂಗಲ ಪೊಲೀಸರು, ಬೆಂಕಿ ನಂದಿಸಲು ಹರಸಾಹಸ ಪಟ್ಟರು.


