
ಬೆಂಗಳೂರು : ಬೆಂಗಳೂರು ನಗರದಲ್ಲಿ ಪಾಸ್‌ಪೋರ್ಟ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್‌ಪೋರ್ಟ್ ಪರಿಶೀಲನೆ ನಡೆಸುವ ಪ್ರತಿಯೊಬ್ಬ ಅಧಿಕಾರಿಯು ಅಥವಾ ಸಿಬ್ಬಂದಿಯು ಪರಿಶೀಲನೆಯ ಆರಂಭದಿಂದ ಅಂತ್ಯದವರೆಗೆ ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಿರಬೇಕು.
ಠಾಣೆಗೆ ಕರೆಯಿಸುವಂತಿಲ್ಲ: ಪಾಸ್‌ಪೋರ್ಟ್ ಅರ್ಜಿದಾರರನ್ನು ಯಾವುದೇ ಕಾರಣಕ್ಕೂ ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ಕರೆಯಿಸುವಂತಿಲ್ಲ.
ಪೂರ್ವ ಮಾಹಿತಿ ನೀಡುವುದು: ಅಧಿಕಾರಿಯು ಅರ್ಜಿದಾರರ ಮನೆಗೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಎಸ್‌ಎಮ್‌ಎಸ್ (SMS) ಅಥವಾ ಕರೆ ಮಾಡುವ ಮೂಲಕ ಮಾಹಿತಿ ನೀಡಬೇಕು.
ಸ್ಥಳೀಯರ ವಿಚಾರಣೆ: ಅರ್ಜಿದಾರರು ನೀಡಿದ ವಿಳಾಸಕ್ಕೆ ಭೇಟಿ ನೀಡಿ, ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸುವುದು ಕಡ್ಡಾಯ.
ಲಂಚ ಅಥವಾ ಕಿರುಕುಳಕ್ಕೆ ನಿರ್ಬಂಧ: ಅರ್ಜಿದಾರರಿಂದ ಯಾವುದೇ ರೀತಿಯ ಆಮಿಷ ನಿರೀಕ್ಷಿಸುವಂತಿಲ್ಲ ಅಥವಾ ಲಂಚಕ್ಕಾಗಿ ಕಿರುಕುಳ ನೀಡುವಂತಿಲ್ಲ. ಒಂದು ವೇಳೆ ಅರ್ಜಿಯ ಬಗ್ಗೆ ‘ಪ್ರತಿಕೂಲ ವರದಿ’ ನೀಡಬೇಕಾದರೆ ಸೂಕ್ತ ಪುರಾವೆಗಳಿರಬೇಕು.
ಶಿಸ್ತು ಕ್ರಮ: ಈ ನಿಯಮಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.



