ಬೆಳಗಾವಿಯಲ್ಲಿ ಭಾನುವಾರ ಇಡೀ ದಿನ ಬಿಡುವಿಲ್ಲದ ಓಡಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಳಗಾವಿ: ಎಐಸಿಸಿಯಿಂದ ನಗರದಲ್ಲಿ ಜ.21ರಂದು ಆಯೋಜಿಸಿರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶದ ಅಂಗವಾಗಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಇಡೀ ದಿನ ಬಿಡುವಿಲ್ಲದ ಚಟುವಟಿಕೆಗಳಲ್ಲಿ ಪಾಲ್ಗೊಂಡರು.
1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಈಗ ನೂರು ವರ್ಷ.
ಅದರ ಸ್ಮರಣಾರ್ಥ ‘ಗಾಂಧಿ ಭಾರತ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಿಗ್ಗೆ ಇಲ್ಲಿನ ಕಪಿಲೇಶ್ವರ ಮಂದಿರಕ್ಕೆ ತೆರಳಿ ಅವರು ಪೂಜೆ ಸಲ್ಲಿಸಿದರು. ‘ರಕ್ಷಣೆ ಕೋರಿ ಪೂಜೆ ಸಲ್ಲಿಸಿದ್ದೇನೆ’ ಎಂದು ಮಾಧ್ಯಮದವರಿಗೆ ತಿಳಿಸಿದರು.
ಬೆಳಗಾವಿ ಹೊರವಲಯದ ಸಾಂಬ್ರಾ ವಿಮಾನ ನಿಲ್ದಾಣದ ರಸ್ತೆಯಲ್ಲಿ ಹೆಜ್ಜೆಹೆಜ್ಜೆಗೂ ರಾರಾಜಿಸುತ್ತಿರುವ ಕಾಂಗ್ರೆಸ್ ನಾಯಕರ ಪಟಗಳು ಪ್ರಜಾವಾಣಿ ಚಿತ್ರನಂತರ, ಸುವರ್ಣ ವಿಧಾನಸೌಧದಲ್ಲಿ ನಿರ್ಮಿಸಿದ ಮಹಾತ್ಮ ಗಾಂಧಿ ಅವರ ಬೃಹತ್ ಪ್ರತಿಮೆ ಅನಾವರಣ, ನೂರು ವರ್ಷಗಳ ಹಿಂದೆ ನಡೆದ ಸಮಾವೇಶದ ಸ್ಥಳ (ವೀರಸೌಧ), ಸದ್ಯದ ಸಮಾವೇಶಕ್ಕೆ ಸಿ.ಪಿ.ಇಡಿ ಮೈದಾನಗಳನ್ನು ಸಿದ್ಧಗೊಳಿಸಿರುವುದನ್ನು ಅವರು ಪರಿಶೀಲಿಸಿದರು.
ಕಾಂಗ್ರೆಸ್ ಭವನದಲ್ಲಿ ಬೆಳಿಗ್ಗೆ ಮುಖಂಡರು, ಶಾಸಕರ ಸಭೆ ನಡೆಸಿ ಸಮಾವೇಶ ಜವಾಬ್ದಾರಿಗಳನ್ನು ಹಂಚಿದರು. ಇಡೀ ದಿನ ಕೆಲವು ನಾಯಕರ ಮನೆಗಳಿಗೂ ಭೇಟಿ ನೀಡಿದರು. ಸಂಜೆಗೆ ಮತ್ತೆ ನೀರಾವರಿ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
‘ಈ ಓಡಾಟ ಹಾಗೂ ಸಭೆಗಳ ಉದ್ದೇಶವೇನು’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಮಾವೇಶ ಮುಗಿದ ಮಾರನೇ ದಿನ; ಜ.22ರಂದು ಎಲ್ಲರಿಗೂ ಉತ್ತರ ಕೊಡುತ್ತೇನೆ’ ಎಂದಷ್ಟೇ ಹೇಳಿದರು.
‘ದಕ್ಷಿಣ ಕಾಶಿ’ ಎಂದೇ ಕರೆಯುವ ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಭಾನುವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲಿಂಗಕ್ಕೆ ಕ್ಷೀರಾಭಿಷೇಕ ನೆರವೇರಿಸಿದರುಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಇದು ಎಲ್ಲರ ಸಮಾವೇಶ. ಈ ದೇಶ ಸಂವಿಧಾನ ಉಳಿಸಲು ಮತ್ತು ಗಾಂಧಿ ವಿಚಾರಧಾರೆ ಪ್ರಚಾರ ಮಾಡಲು ಇಚ್ಛಿಸುವ ಯಾರಾದರೂ ಸಮಾವೇಶದಲ್ಲಿ ಪಾಲ್ಗೊಳ್ಳಬಹುದುಮತ್ತೆ ಮರಳಿದ ‘ಕಾಂಗ್ರೆಸ್ ವೈಭವ’
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಕಾರಣ ನಗರದಲ್ಲಿ ಮತ್ತೆ ‘ಕಾಂಗ್ರೆಸ್ ವೈಭವ’ ಮರುಕಳಿಸಿದೆ. ಸುವರ್ಣ ವಿಧಾನಸೌಧ ಕಾಂಗ್ರೆಸ್ ಭವನ ವೀರಸೌಧ ಸೇರಿದಂತೆ ಎಲ್ಲ ಕಡೆಯೂ ಪಕ್ಷದ ಧ್ವಜಗಳು ಬ್ಯಾನರ್‌ಗಳು ರಾರಾಜಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ನಾಯಕರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುರ್ಜೇವಾಲಾ ಸೇರಿದಂತೆ ಎಲ್ಲ ನಾಯಕರು ಬೃಹತ್ ಕಟೌಟುಗಳು ಗಮನ ಸೆಳೆಯುತ್ತವೆ. 18 ಕಿ.ಮೀ ದೂರದ ಸಾಂಬ್ರಾ ವಿಮಾನ ನಿಲ್ದಾಣದಿಂದ ಅಧಿವೇಶನ ನಡೆಯಲಿರುವ ಸಿ.ಪಿ.ಇಡಿ ಮೈದಾನದವರೆಗೂ ಕಾಂಗ್ರೆಸ್ ಬಾವುಟಗಳೇ ಹಾರಾಡುತ್ತಿವೆ. ರಸ್ತೆಗಳು ವೃತ್ತಗಳನ್ನು ಆಕರ್ಷಕ ಸ್ವಾಗತ ಕಮಾನುಗಳಿಂದ ಅಲಂಕರಿಸಲಾಗಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲಾಗುತ್ತಿದೆ. ಭವ್ಯವಾದ ಮಂಟಪ ಶಾಮಿಯಾನವೂ ಸಿದ್ಧಗೊಂಡಿದೆ. ಕಳೆದ ಡಿ.26 ಹಾಗೂ 27ರಂದು ಗಾಂಧಿ ಭಾರತ ಸಮಾವೇಶ ಆಯೋಜಿಸಲಾಗಿತ್ತು. 26ರಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿತ್ತು. ಅದೇ ದಿನ ರಾತ್ರಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ನಿಧನರಾದ ಕಾರಣ 27ರ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಈಗ ಅದನ್ನೇ ಮತ್ತೆ ಆಯೋಜನೆ ಮಾಡಲಾಗಿದೆ.
– ಎಲ್ಲರನ್ನೂ ಹೊರಹಾಕಿ ಸಭೆ
ಸಚಿವ ಸತೀಶ ಜಾರಕಿಹೊಳಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡ ಮಾಜಿ ಶಾಸಕ ಫಿರೋಜ್ ಸೇಠ್ ಮನೆಯಲ್ಲಿ ಶಿವಕುಮಾರ್ ಬೆಳಗಿನ ಉಪಾಹಾರ ಸೇವಿಸಿದರು. ಫಿರೋಜ್ ಅವರ ಸಹೋದರ ಶಾಸಕ ಆಸಿಫ್ ಸೇಠ್ ಸಚಿವ ಎಂ.ಸಿ.ಸುಧಾಕರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕೂಡ ಉಪಾಹಾರದಲ್ಲಿ ಜತೆಗಿದ್ದರು. ಬಳಿಕ ಅವರೆಲ್ಲರನ್ನೂ ಹೊರಕ್ಕೆ ಕಳುಹಿಸಿ ಶಿವಕುಮಾರ್ ಫಿರೋಜ್ ಅವರೊಂದಿಗೆ ಗೋಪ್ಯ ಮಾತುಕತೆ ನಡೆಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಫಿರೋಜ್ ಸೇಠ್ ಅವರು ಸತೀಶ ವಿರುದ್ಧ ಮುನಿಸಿಕೊಂಡಿದ್ದರು. ಆದರೆ ಟಿಕೆಟ್ ಪಡೆದು ಗೆದ್ದ ಅವರ ಸಹೋದರ ಆಸಿಫ್ ಅವರು ಸತೀಶ್ ಬೆಂಬಲಿಗರಲ್ಲಿ ಗುರುತಿಸಿಕೊಂಡಿದ್ದಾರೆ. ’15 ಶಾಸಕರು ದುಬೈ ಪ್ರವಾಸಕ್ಕೆ ಹೋಗುತ್ತೇವೆ’ ಎಂಬ ಹೇಳಿಕೆ ನೀಡಿದ ಶಾಸಕ ಆಸಿಫ್ ಅವರು ಶಿವಕುಮಾರ್ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಈ ವಿಚಾರವಾಗಿ ಶಿವಕುಮಾರ್ ಶಾಸಕರಿಗೆ ಕಾರಿನಲ್ಲೇ ‘ಕ್ಲಾಸ್’ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.


