EducationFeature

ಉನ್ನತ ಶಿಕ್ಷಣದಲ್ಲಿ ಜಾತಿ ಮತ್ತು ಭ್ರಷ್ಟಾಚಾರ…….

ಉನ್ನತ ಶಿಕ್ಷಣದಲ್ಲಿ ಜಾತಿ ಮತ್ತು ಭ್ರಷ್ಟಾಚಾರ……. 
 
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರಕ್ಕಿಳಿದ ಉನ್ನತ ಶಿಕ್ಷಣದ ವಿಶ್ವವಿದ್ಯಾಲಯಗಳು…… ಭಾರತದ ವಿಶ್ವವಿದ್ಯಾಲಯಗಳಿಗೆ ಐತಿಹಾಸಿಕ ಮಹತ್ವವಿದೆ. 
 
ಭಾರತದಲ್ಲಿ ಅಜ್ಞಾನ, ಅನಕ್ಷರತೆ ಬಹಳ ಹಿಂದಿನಿಂದಲೂ ತಾಂಡವವಾಡುತ್ತಿದ್ದರೂ, ಶೋಷಿತ ವರ್ಗಗಳನ್ನು ಶಿಕ್ಷಣದಿಂದ ದೂರ ಇಟ್ಟಿದ್ದರೂ, ಕೆಲವು ವರ್ಗಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿಯೇ ಇತ್ತು. ಗುರುಕುಲ ಶಿಕ್ಷಣದ ಜೊತೆಗೆ ಭಾರತದಲ್ಲಿ ಬಹಳ ಹಿಂದೆಯೇ ನಳಂದ, ತಕ್ಷಶಿಲಾ ಮುಂತಾದ ವಿಶ್ವವಿದ್ಯಾಲಯಗಳಿದ್ದವು. ಸ್ವಾತಂತ್ರ ಪೂರ್ವದಲ್ಲಿಯೇ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಸ್ವಾತಂತ್ರ್ಯ ನಂತರದಲ್ಲಿ ಶಿಕ್ಷಣ ಎಲ್ಲಾ ಸಾಮಾನ್ಯರ ಮೂಲಭೂತ ಹಕ್ಕಾದ ಮೇಲೆ ಕಲ್ಕತ್ತಾ, ಮುಂಬೈ, ಮದ್ರಾಸ್, ದೆಹಲಿ, ಬೆಂಗಳೂರು ಮುಂತಾದ ನಗರಗಳಲ್ಲಿ ವಿಶ್ವವಿದ್ಯಾಲಯಗಳು ಬಹಳ ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿದವು….. ಆಗೆಲ್ಲಾ ತಾಲ್ಲೂಕಿಗೆ ಒಬ್ಬರು ಅಥವಾ ಇಬ್ಬರು ಮಾತ್ರ ಉನ್ನತ ಶಿಕ್ಷಣದ ಹಂತ ತಲುಪುತ್ತಿದ್ದರು. 
ಮುಂದೆ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಅನೇಕ ವಿಶ್ವವಿದ್ಯಾಲಯಗಳು ಪ್ರಾರಂಭವಾದವು. ಆಗ ನಿಜಕ್ಕೂ ಡಾಕ್ಟರೇಟ್ ಪ್ರಬಂಧಗಳು ಅಥವಾ ಸ್ನಾತಕೋತ್ತರ ವಿದ್ಯಾರ್ಥಿಗಳ ಅಧ್ಯಯನದ ಗುಣಮಟ್ಟ ತುಂಬಾ ಮೇಲ್ದರ್ಜೆಯದಾಗಿತ್ತು. ಎಷ್ಟೋ ಜನ ಅವರವರ ವಿಷಯಗಳಲ್ಲಿ ಸಾಕಷ್ಟು ಪ್ರಾವೀಣ್ಯತೆ ಪಡೆಯುತ್ತಿದ್ದರು. ಸಮಾಜವು ಅಂತಹವರನ್ನು ಬುದ್ಧಿವಂತರೆಂದು ಗುರುತಿಸುತ್ತಿತ್ತು…… ಆದರೆ ಎಲ್ಲೋ, ಯಾವಾಗಲೋ ಇದು ಹಾದಿ ತಪ್ಪಿದೆ. ನಿರ್ದಿಷ್ಟವಾಗಿ ಇಂತಹದೇ ಕಾಲಘಟ್ಟ ಎಂದು ಗುರುತಿಸಲು ಸಾಧ್ಯವಿಲ್ಲ. ಆದರೆ ಭಾರತದ ಜಾತಿ ವ್ಯವಸ್ಥೆ ಚುನಾವಣಾ ರಾಜಕೀಯದ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳನ್ನು ಪ್ರವೇಶಿಸಿತು. ಉನ್ನತ ಶಿಕ್ಷಣದಲ್ಲಿ ಬಹುತೇಕ ಜಾತಿ ಆಧಾರದ ಮೇಲೆಯೇ ಕುಲಪತಿಗಳು, ಪ್ರೊಫೆಸರ್ ಗಳು, ಸಂಶೋಧನಾ ವಿದ್ಯಾರ್ಥಿಗಳು ಎಲ್ಲರನ್ನೂ ಆಯ್ಕೆಮಾಡುವ ಮಟ್ಟಕ್ಕೆ ಬೆಳೆಯಿತು. ಎಷ್ಟೋ ಯುವಕರಿಗೆ ತಾವು ಯಾವ ಜಾತಿ ಎಂಬುದು ಅರಿವಿಗೆ ಬರುತ್ತಿದ್ದುದೇ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಗಳನ್ನು ಪ್ರವೇಶಿಸಿದಾಗ. ಅಲ್ಲಿಯವರೆಗೂ ಕೇವಲ ಸರ್ಟಿಫಿಕೇಟ್ ಗಳಲ್ಲಿ ಮಾತ್ರ ಜಾತಿ ನಮೂದಾಗಿರುತ್ತಿತ್ತು ಮತ್ತು ಅದನ್ನು ನಿರ್ಲಕ್ಷಿಸಲಾಗುತ್ತಿತ್ತು…. ತದನಂತರದಲ್ಲಿ ಜಾತಿಯನ್ನು ಮೀರಿ ಭ್ರಷ್ಟಾಚಾರ ಮತ್ತು ಕೆಟ್ಟ ರಾಜಕೀಯ ವಿಶ್ವವಿದ್ಯಾಲಯಗಳ ಪ್ರವೇಶ ಪಡೆಯಿತು.
 ಜಾತಿ ಮತ್ತು ಭ್ರಷ್ಟಾಚಾರ ಎರಡೂ ಸಮ್ಮಿಲನಗೊಂಡು ವಿಶ್ವವಿದ್ಯಾಲಯಗಳು ನಿಜವಾದ ಜ್ಞಾನ ಕೇಂದ್ರಗಳಾಗದೆ ದಾರಿ ತಪ್ಪಿದವು…. ಹೌದು ಒಂದು ಹಂತಕ್ಕೆ ವಿಶ್ವವಿದ್ಯಾಲಯಗಳು ಅತ್ಯುತ್ತಮ ಗುಣಮಟ್ಟದ ಚಿಂತನೆಗಳನ್ನು ಸಾಮಾಜಿಕ ಹೋರಾಟಗಾರರನ್ನು, ಆಡಳಿತಗಾರರನ್ನು, ವಿಜ್ಞಾನಿಗಳನ್ನು ನೀಡಿದೆ ಮತ್ತು ನೀಡುತ್ತಲೂ ಇದೆ. ಆದರೆ ಇತ್ತೀಚೆಗೆ ಬಯಲಾದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ ಅಂದರೆ ನ್ಯಾಕ್ ಎ, ಎ ಪ್ಲಸ್, ಎ ಎ ಪ್ಲಸ್ ಗ್ರೇಡ್ ನೀಡಲು ಲಂಚ ಪಡೆಯುತ್ತಿದ್ದ ವಿಷಯ ಬಹಿರಂಗವಾದ ಸುದ್ದಿಯನ್ನು ಕೇಳಿದ ನಂತರ ಮನಸ್ಸು ಕುಸಿದು ಹೋಯಿತು.
 ಇದು ಹೊಸದೇನು ಅಲ್ಲ ನಿಜ. ಒಳಗೊಳಗೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಆದರೆ ಇಷ್ಟೊಂದು ಬಹಿರಂಗವಾಗಿದ್ದು ನಿಜಕ್ಕೂ ಭಾರತದ ಉನ್ನತ ಶಿಕ್ಷಣದ ಬಗ್ಗೆ ಕಾಳಜಿ ಇರುವ ಎಲ್ಲರಿಗೂ ನೋವಿನ ವಿಷಯವೇ…. ಒಂದು ದೇಶದ ಅಭಿವೃದ್ಧಿಯ ಮಾನದಂಡಗಳಲ್ಲಿ ಆ ದೇಶದ ಯುವಜನತೆ ಪಡೆದಿರುವ ಉನ್ನತ ಶಿಕ್ಷಣದ ಸಂಖ್ಯೆಗಳ ಆಧಾರವೂ ಒಂದು. ಅದರ ಮೇಲೆಯೂ ಅಭಿವೃದ್ಧಿಯನ್ನು ಅಳೆಯಲಾಗುತ್ತದೆ. ಉನ್ನತ ಶಿಕ್ಷಣ ಪಡೆದ ಪ್ರಜೆಗಳು ದೇಶದ ಆಧಾರ ಸ್ತಂಭಗಳು ಮತ್ತು ಬಹುದೊಡ್ಡ ಆಸ್ತಿ. ಈ ಹಿನ್ನೆಲೆಯಲ್ಲಿ….. ಉನ್ನತ ಶಿಕ್ಷಣದಲ್ಲಿ ಓದುವ, ಅಧ್ಯಯನ ಮಾಡುವ ಆ ವಾತಾವರಣದ ಗುಣಮಟ್ಟವೇ ಬೇರೆ ಎತ್ತರದಲ್ಲಿರುತ್ತದೆ.
ಅದೊಂದು ಅದ್ಭುತ ಅನುಭವ. ಕಾರಣ ಸಾಮಾನ್ಯವಾಗಿ ಉನ್ನತ ಶಿಕ್ಷಣ ಪಡೆಯುವ ವಯಸ್ಸು 20/25 ಈಗಿನ ಕಾಲದಲ್ಲಿ ನಮ್ಮ ಚಿಂತನೆಗಳು ನಿಜಕ್ಕೂ ಒಂದು ದಿಕ್ಕನ್ನು ಮೂಡಿಸುವ ಯೌವ್ವನ ಅದಾಗಿರುತ್ತದೆ. ಬಿಸಿ ರಕ್ತದ ಯುವಕ ಯುವತಿಯರಲ್ಲಿ ಧೈರ್ಯ ಮನೆ ಮಾಡಿರುತ್ತದೆ. ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕುವ ಬುದ್ಧಿಮತ್ತೆ, ಸಾಮರ್ಥ್ಯ ಆ ಕ್ಷಣದಲ್ಲಿ ಆ ಸಮಯದಲ್ಲಿ ಇರುತ್ತದೆ. ಆದ್ದರಿಂದ ಉನ್ನತ ಶಿಕ್ಷಣವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
ಹಾಗಾದಾಗ ಯುವಶಕ್ತಿಯೇ ದಾರಿ ತಪ್ಪುತ್ತದೆ…… ಇದೇ ಸಂದರ್ಭದಲ್ಲಿ ಕುಲಪತಿಗಳ ಆಯ್ಕೆಯ ಮಾನದಂಡಕ್ಕಾಗಿ ಯುಜಿಸಿ ಹೊಸ ನಿಯಮಗಳನ್ನು ರೂಪಿಸಿ ಬಹುತೇಕ ಕೇಂದ್ರವೇ ಅದನ್ನು ನಿಯಂತ್ರಿಸುವ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದು ಅಪಾಯಕಾರಿಯಾಗಬಹುದು. ಏಕೆಂದರೆ ಶಿಕ್ಷಣ ಸಂವಿಧಾನದ ಮೂಲದಲ್ಲಿ ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳ ಸಮ ನಿಯಂತ್ರಣದಲ್ಲಿದೆ. ಅದನ್ನು ನೇರವಾಗಿ ಕೇಂದ್ರದ ಆಯ್ಕೆಗೆ ಬಿಡುವುದು ಒಕ್ಕೂಟ ವ್ಯವಸ್ಥೆಯಲ್ಲಿ ಒಳ್ಳೆಯ ಲಕ್ಷಣವಲ್ಲ. ಸ್ಥಳೀಯ ವಿಷಯಗಳಿಗೆ ಮಹತ್ವ ಇರಬೇಕು. ಈಗಾಗಲೇ ಕುಲಪತಿಗಳ ಆಯ್ಕೆಯಲ್ಲಿ ಜಾತಿ, ಹಣ ತುಂಬಿ ತುಳುಕುತ್ತಿದೆ. ಅಲ್ಲಿನ ಸರ್ಕಾರಗಳು ಮತ್ತು ರಾಜ್ಯಪಾಲರು ತಮ್ಮ ತಮ್ಮ ಪಕ್ಷಗಳ ಸೈದ್ಧಾಂತಿಕ ನೆಲೆಯಲ್ಲಿ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಲ್ಲದೆ ಕೋಟಿ ಕೋಟಿ ಹಣದ ಸೂಟ್ ಕೇಸ್ ಸಂಸ್ಕೃತಿಯೂ ಬಲವಾಗಿ ಬೆಳೆದಿದೆ……
ಉನ್ನತ ಶಿಕ್ಷಣದಲ್ಲಿಯೇ ಇಷ್ಟೊಂದು ಜಾತಿ ಮತ್ತು ಭ್ರಷ್ಟಾಚಾರ ನಡೆದರೆ ಭಾರತದ ನಿಜವಾದ ಆಧಾರ ಸ್ತಂಭಗಳು ಮಲಿನವಾದರೆ ದೇಶ ಆಂತರಿಕವಾಗಿ ಕುಸಿಯ ತೊಡಗುತ್ತದೆ. ಏಕೆಂದರೆ ಉನ್ನತ ಶಿಕ್ಷಣದ ಪಡೆದ ವ್ಯಕ್ತಿಗಳೇ ಇಷ್ಟೊಂದು ಜಾತಿವಾದಿ ಮತ್ತು ಭ್ರಷ್ಟಾಚಾರಿಗಳಾದರೆ ಅದನ್ನು ತಡೆಯುವುದು ಕಷ್ಟ. ಅದು ಇಡೀ ವ್ಯವಸ್ಥೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಪ್ರತಿಭಾ ಪಲಾಯನ ಉಂಟಾಗುತ್ತದೆ. ದೇಶದ ಶ್ರೇಯೋಭಿವೃದ್ಧಿಗೆ ಬೇಕಾದ ಅತ್ಯುತ್ತಮ ಸಂಶೋಧನಾ ವರದಿಗಳು ಮೂಲೆಗುಂಪಾಗುತ್ತವೆ. ಡಾಕ್ಟರೇಟ್ ಗಳು ಹಾದಿ ಬೀದಿಯಲ್ಲಿ ಬಿಕರಿಯಾಗುತ್ತದೆ.
ಆಗ ದೀರ್ಘಕಾಲದಲ್ಲಿ ದೇಶದ ಶೈಕ್ಷಣಿಕ ವ್ಯವಸ್ಥೆ ಹಾಳಾಗುತ್ತದೆ…… ಈಗಲೂ ಸಹ ವಿಶ್ವಮಟ್ಟದ ಉನ್ನತ ಶಿಕ್ಷಣದ ಸಂಶೋಧನೆಗಳು ನಮ್ಮ ದೇಶದ ಸಾಮರ್ಥ್ಯಕ್ಕೆ ತಕ್ಕಂತೆ ಬೆಳವಣಿಗೆಯಾಗುತ್ತಿಲ್ಲ. ನೊಬೆಲ್ ಅಥವಾ ಇತರ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರೆಯುತ್ತಿಲ್ಲ. ಏಕೆಂದರೆ ಮತ್ತದೇ ಜಾತಿ ಮತ್ತು ಭ್ರಷ್ಟಾಚಾರ. ಈ ಬಗ್ಗೆ ಇಡೀ ದೇಶದ ಎಲ್ಲಾ ಶಿಕ್ಷಣ ಸಚಿವರು ಕುಳಿತು ಏನನ್ನಾದರೂ ಕ್ರಮ ಕೈಗೊಳ್ಳುವುದು ತೀರಾ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ.
 
ಇಲ್ಲದಿದ್ದರೆ ಉನ್ನತ ಶಿಕ್ಷಣವು ದುಷ್ಟ ವ್ಯವಸ್ಥೆಯ ಭಾಗವಾಗಿ ನಮ್ಮ ಮಕ್ಕಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುತ್ತದೆ….. ಅನಿರೀಕ್ಷಿತ ರೋಗಗಳು ಮತ್ತು ಸಾವುಗಳ ಸುತ್ತಾ ನಿಜ ಬದುಕಿನ ಹುಡುಕಾಟ……….. ಆರೋಗ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಸುದ್ದಿಗಳು ಸಹಜವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು….. ಕೆಲವು ದಶಕಗಳ ಹಿಂದೆ 80 ರ ನಂತರದ ಅನಾರೋಗ್ಯ ಮತ್ತು ಸಾವುಗಳ ಸುದ್ದಿಗಳನ್ನು ಕೇಳುತ್ತಿದ್ದೆವು. ನಂತರದಲ್ಲಿ 70 ರ ಆಸುಪಾಸಿನ ವಯಸ್ಸು, ತದನಂತರ 60 ರ ಸುತ್ತಮುತ್ತಲಿನ ವಯಸ್ಸು, ಕೆಲವು ವರ್ಷಗಳ ಹಿಂದೆ 40/50 ರ ವಯಸ್ಸಿನಲ್ಲಿಯೇ ಅನಾರೋಗ್ಯ ಮತ್ತು ಸಾವುಗಳು ಸಾಮಾನ್ಯ ಎನ್ನುವಂತಾಗಿ, ಇತ್ತೀಚೆಗೆ 20/30/40 ರ ನಡುವೆಯೂ ಪ್ರಕರಣಗಳು ಹೆಚ್ಚಾಗುತ್ತಿವೆ….. ಇದು ಅನಿರೀಕ್ಷಿತವಲ್ಲ. ಬಹುತೇಕ ನಿರೀಕ್ಷಿತವೇ. 
 
ಕಳೆದ 15/20 ವರ್ಷಗಳ ಜೀವನ ಶೈಲಿಯ ದುಷ್ಪರಿಣಾಮ ಈಗ ನಿಧಾನವಾಗಿ ನಮ್ಮ ಮೇಲೆ ಪ್ರಭಾವ ಬೀರತೊಡಗಿದೆ. ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಆದರೆ ಸಮಸ್ಯೆಯ ಮೂಲವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅತ್ಯಂತ ಮೂಲಭೂತ ಸಮಸ್ಯೆ ಎಂದರೆ ಮನುಷ್ಯ ಹೆಚ್ಚು ಶಿಕ್ಷಣ ಪಡೆದು ಅಕ್ಷರಸ್ಥನಾದಷ್ಟು ಸಾಮಾಜಿಕ ಸ್ಪಂದನೆ ತುಂಬಾ ಕಡಿಮೆಯಾಗಿದೆ. ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯ ಸಂದರ್ಭದಲ್ಲೂ ನೇರ ಪ್ರತಿಕ್ರಿಯೆ ಬಹುತೇಕ ನಾಶವಾಗಿದೆ. ಕೇವಲ ಸಾಮಾಜಿಕ ಜಾಲತಾಣಗಳ ಮೂಲಕ ಒಂದಷ್ಟು ಉಡಾಫೆ ಅಭಿಪ್ರಾಯ ವ್ಯಕ್ತಪಡಿಸುವುದು ಬಿಟ್ಟರೆ ಸಮಗ್ರ ಚಿಂತನೆಯ ಒಳನೋಟ ಮಾಯವಾಗಿ ಸಂಕುಚಿತ ಮನೋಭಾವ ಬೆಳೆದಿದೆ…….. ಆರ್ಥಿಕ ಗುಲಾಮಿತನದ ಸುಳಿಗೆ ಸಿಲುಕಿ ತಾನು ತನ್ನ ಕುಟುಂಬ ಎಂಬುದಷ್ಟೇ ಆತನ ಆದ್ಯತೆಯಾಗಿದೆ.
ಅದರ ಪರಿಣಾಮ ಒಂದು ಸ್ವಂತ ಮನೆ, ಕಾರು, ನಿಶ್ಚಿತ ತಿಂಗಳ ಆದಾಯ ಗಳಿಸಲು ತನ್ನ ಬದುಕಿನ ಗುರಿಯನ್ನು ನಿಗದಿಪಡಿಸಿಕೊಂಡಿದ್ದಾನೆ. ಸಮಯದ ಮಿತಿ ಇಲ್ಲದೇ ಬಹುತೇಕ ಕುಟುಂಬದ ಎಲ್ಲಾ ವಯಸ್ಕರು ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಇದೆ. ಇದರ ಪರಿಣಾಮ ಸುತ್ತಮುತ್ತಲಿನ ಒಟ್ಟು ಆಗುಹೋಗುಗಳಿಗೆ ಆತ ಹೆಚ್ಚು ಕಡಿಮೆ ಕುರುಡಾಗಿದ್ದಾನೆ. ಇದರ ಲಾಭ ಪಡೆಯಲು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸರ್ಕಾರಗಳು ಅಭಿವೃದ್ಧಿ ಎಂಬ ಬಲೆ ಬೀಸಿದರು. ಶಿಕ್ಷಣ ದುಬಾರಿಯಾಯಿತು, ಗ್ಯಾಸ್, ವಿದ್ಯುತ್, ನೀರು, ಮನೆ ಬಾಡಿಗೆ, ಜೀವ ವಿಮೆ, ಮೊಬೈಲ್ ಇಂಟರ್ನೆಟ್, ಟೋಲ್ ಬೆಲೆ ಹೆಚ್ಚು ಮತ್ತು ಅನಿವಾರ್ಯಿತು, ಸಿಮೆಂಟ್ ಕಬ್ಬಿಣ, ಫರ್ನೀಚರ್, ಲೈಟ್ಸ್, ಇಂಟೀರಿಯರ್ ಮುಂತಾದ ಮನೆ ನಿರ್ಮಾಣ ಗಗನಕ್ಕೇರಿತು. ತೆರಿಗೆ, ಆರೋಗ್ಯ, ಮದುವೆ ಖರ್ಚುಗಳು ಎಲ್ಲವೂ ಹೆಚ್ಚಾಗುತ್ತಲೇ ಇದೆ. ಇದೆಲ್ಲದರ ಪರಿಣಾಮ ಸಮಯದ ಒತ್ತಡಕ್ಕೆ ಸಿಲುಕಿದ. ಸಾಮಾಜಿಕ ಸೂಕ್ಷ್ಮತೆ ಕಳೆದುಕೊಂಡು ಬಹುತೇಕ ನಿರ್ವೀರ್ಯನಾದ….. ಯಾವಾಗ ಆತ ತನ್ನ ಸಂವೇದನಾ ಶೀಲತೆಯನ್ನು ಕಳೆದುಕೊಂಡು ಹಣ ಕೇಂದ್ರಿತ ಮನಸ್ಥಿತಿ ಬೆಳೆಸಿಕೊಂಡನೋ ಆಗಲೇ ಅವನ ದೈಹಿಕ ಮತ್ತು ಮಾನಸಿಕ ಅಧೋಗತಿ ಪ್ರಾರಂಭವಾಯಿತು…. ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ವಿಷಯುಕ್ತವಾಯಿತು. ಶ್ವಾಸ ಕೋಶ, ರಕ್ತನಾಳಗಳು, ನರಮಂಡಲ, ಕರುಳು, ಹೃದಯ ಸೇರಿ ಎಲ್ಲವೂ ಶಿಥಿಲವಾಗತೊಡಗಿತು. ತಂತ್ರಜ್ಞಾನದ ಅಭಿವೃದ್ಧಿ ದೇಹದ ಚಲನೆಯನ್ನು ನಿಯಂತ್ರಿಸಿತು. ಒತ್ತಡ ದೇಹದ ತೂಕವನ್ನು ಹೆಚ್ಚಿಸಿತು. ಹಣ ನಮ್ಮನ್ನೇ ಖರೀದಿ ಮಾಡಿತು. ದುರ್ಬಲಗೊಂಡ ದೇಹ ಮತ್ತು ಮನಸ್ಸು ರೋಗಗಳ ಗೂಡಾಯಿತು…… ಹಳೆ ಖಾಯಿಲೆಗಳ ಜೊತೆ ಹೊಸ ಖಾಯಿಲೆಗಳು ಸೃಷ್ಟಿಯಾದವು. ವೈದ್ಯಕೀಯ ಕ್ಷೇತ್ರ ಹೆಚ್ಚು ಮುಂದುವರಿದಷ್ಟು ಆರೋಗ್ಯವಂತರ ಸಂಖ್ಯೆ ಕಡಿಮೆಯಾಯಿತು. ( Medical science is so advanced that only few healthy people is living in this earth.) ಮೆಟ್ರೋ, ಫ್ಲೈ ಓವರ್, ದಶಪಥ ರಸ್ತೆ, ಡಿ ಮಾರ್ಟ್, ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ, ಅದ್ಬುತ ಕಟ್ಟಡಗಳು, ವೇಗದ ವಾಹನಗಳು, ಹೈಟೆಕ್ ಆಸ್ಪತ್ರೆಗಳು, ಶಾಪಿಂಗ್ ಮಾಲ್ ಗಳು ಮುಂತಾದ ಕೆಲಸಗಳನ್ನು ಅತ್ಯಂತ ಸಂಭ್ರಮಿಸುವ ಜನಗಳು, ಮನುಷ್ಯ ದೇಹವನ್ನು ಅತ್ಯಂತ ಕಾಡುತ್ತಿರುವ ಆಹಾರದ ಕಲಬೆರಕೆ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಆರೋಗ್ಯ ವಿಮೆ ಮತ್ತು ಆಸ್ಪತ್ರೆಗಳ ಖರ್ಚಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ತೀರಾ ವಿಚಿತ್ರವೆಂದರೆ, ಸ್ವಂತ ಮನೆಯಲ್ಲಿ ವಾಸಿಸುವ ಜೀತದಾಳುಗಳು, ಕಾರಿನಲ್ಲಿ ಓಡಾಡುವ ಜೀತದಾಳುಗಳು, ಅತ್ಯಧಿಕ ಸಂಬಳ ಪಡೆಯುವ ಜೀತದಾಳುಗಳು, ದೊಡ್ಡ ಅಧಿಕಾರದಲ್ಲಿ ಇರುವ ಜೀತದಾಳುಗಳು, ಡಾಕ್ಟರೇಟ್ ಮಾಡಿಯೂ ಜೀತದಾಳುಗಳಾಗಿರುವವರು ಇತ್ಯಾದಿ ಇತ್ಯಾದಿ ಆಧುನಿಕ ಜೀತದಾಳು ಸಮುದಾಯಗಳು ಸೃಷ್ಟಿಯಾಗಿವೆ. ಅವು ಎಲ್ಲಾ ಕ್ಷೇತ್ರಗಳಲ್ಲೂ ಇದೆ….. ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಜೀವಂತ ಶವಗಳಂತೆ ಬದುಕುತ್ತಿರುವ ಅಸಂಖ್ಯಾತ ಮನುಷ್ಯ ಪ್ರಾಣಿಗಳು ಈಗ ಅನಿರೀಕ್ಷಿತ ರೋಗ ಸಾವುಗಳಗೆ ಆತಂಕ ಎದುರಿಸುವ ಪರಿಸ್ಥಿತಿ ಸೃಷ್ಠಿಯಾಗಿದೆ. ತನ್ನ ವಾಹನದ ಸುರಕ್ಷತೆ ಮತ್ತು ಇಂಧನದ ಉಳಿತಾಯದಲ್ಲಿ ಸುಖ ಬಯಸುವ, ಫ್ಲೈ ಓವರ್ ಕೆಳಗೆ ನಾಶವಾಗುತ್ತಿರುವ ತನ್ನ ಅನ್ನದಾತನ ಬದುಕಿನ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸುವ ದುರಹಂಕಾರಿ ಮನುಷ್ಯ ಪ್ರಜ್ಞೆ, ಬದಲಾದ ಸುಖದ ಸ್ಪರ್ಶದ ಕಲ್ಪನೆ, ಆತನ ‌ಪಂಚೇಂದ್ರಿಯಗಳ ಕಾರ್ಯವಿಧಾನದ ಬಗ್ಗೆಯೇ ಅನುಮಾನ ಮೂಡಿಸಿದೆ…..
ನಿಜವಾದ ಅಭಿವೃದ್ಧಿ ಆರೋಗ್ಯವಂತ‌ ದೇಹ, ಸ್ವಸ್ಥ ಮನಸ್ಸು, ನೆಮ್ಮದಿ ಸಂತೋಷದ ಬದುಕು, ಪ್ರೀತಿಯ ಸಂಬಂಧಗಳು, ಸುರಕ್ಷತೆಯ ಭಾವ, ಬದುಕಿನ ಸಾರ್ಥಕತೆಯ ಕ್ಷಣಗಳ ಹೆಚ್ಚಳವೇ ಹೊರತು ಸ್ವಾತಂತ್ರ್ಯ ಕಳೆದುಕೊಂಡ ನಿದ್ರೆಯ ಕ್ಷಣಗಳು, ಊಟದ ಅವಧಿಗಳು, ಮೈಥುನದ ಸಮಯಗಳು, ವಿಶ್ರಾಂತಿಯ ಸನ್ನಿವೇಶಗಳು…… ಯೋಚಿಸುವ ಸರದಿ ನಮ್ಮದು. ಸಮೂಹ ಸನ್ನಿಗೆ ಒಳಗಾಗಿ ಮರೆಯಾಗುವ ಮುನ್ನ ಮತ್ತೊಮ್ಮೆ ನಮ್ಮನ್ನು ನಾವು ಹುಡುಕಿಕೊಳ್ಳೋಣ. ಸಾಮಾಜಿಕ ಸನ್ನಿವೇಶಗಳಿಗೆ ನೇರವಾಗಿ ಪ್ರತಿಕ್ರಿಯಿಸೋಣ. ವ್ಯಾವಹಾರಿಕ ಜಗತ್ತಿನಲ್ಲಿ ಇದ್ದೂ ನಮ್ಮ ಮೇಲೆ ನಾವು ನಿಯಂತ್ರಣ ಪಡೆಯೋಣ. ಜೀತದಾಳು ಬದುಕಿಗೆ ಮುಕ್ತಿ ನೀಡಿ ಸ್ವಾತಂತ್ರ್ಯದ ತಂಗಾಳಿಗೆ ಮೈ ಮನಸ್ಸು ತೆರೆದು ಕೊಳ್ಳೋಣ…. ***** ನಿನ್ನೆ ದಿನಾಂಕ 7/02/2025 ರ ಶುಕ್ರವಾರ ಬಳ್ಳಾರಿ ಜಿಲ್ಲೆಯ ಪ್ರವಾಸದಲ್ಲಿದ್ದೆನು. ಬೆಳಗ್ಗೆ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ವೈಚಾರಿಕ ಪ್ರಜ್ಞೆಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ತದನಂತರ ಅಲ್ಲಿಂದ ಸುಮಾರು 60 ಕಿಲೋಮೀಟರ್ ದೂರದ ತೆಕ್ಕಲಕೋಟೆಯಲ್ಲಿ ಅಲ್ಲಿನ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಹಾಗೂ ಅದೇ ಊರಿನ ಒಂದು ಖಾಸಗಿ ಶಾಲೆಯಲ್ಲಿ ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದೆನು. ಪಾದಯಾತ್ರೆ ಸಮಯದಲ್ಲಿ ನೆರವಾದ ಹಳೆಯ ಆತ್ಮೀಯ ಗೆಳೆಯರನ್ನು ಭೇಟಿಯಾಗಿ ಸಾಕಷ್ಟು ಚರ್ಚೆ ನಡೆಸಿದೆವು.
 
******** ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button