
ಇತ್ತೀಚೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಬಳಿ ಟಾಯ್ಲೆಟ್ ರೂಮ್, ಕಾರು ಕ್ಲೀನಿಂಗ್ ಸೇರಿದಂತೆ ನಾನಾ ರೀತಿಯ ಕೆಲಸ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ ಇತ್ತು, ಯಾದಗಿರಿಯಲ್ಲಿ ಕೂಡ ಮಕ್ಕಳ ಬಳಿ ಚರಂಡಿ ಸ್ವಚ್ಚಗೊಳಿಸಿದ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಖಾಸಗಿ ಶಾಲೆಯಲ್ಲಿ ಓದಿಸಲು ಕಷ್ಟವಾಗುವ ಹಿನ್ನಲೆ ಪೋಷಕರು ಸರ್ಕಾರಿ ಶಾಲೆಗೆ ಸೇರಿಸಿ ನಮ್ಮ ಮಕ್ಕಳು ಅಲ್ಲಾದರು ಓದಲಿ ಎಂದು ಹೇಳಿ ಕಳುಹಿಸುತ್ತಾರೆ. ಆದರೆ ಕೆಲ ಶಾಲೆಗಳಲ್ಲಿ ಮಕ್ಕಳನ್ನು ಟಾಯ್ಲೆಟ್ ಕ್ಲೀನಿಂಗ್, ಕಾರು ಕ್ಲೀನಿಂಗ್ ಮಾಡಿಸೋದು ಬೆಳಕಿಗೆ ಬರುತ್ತಿದೆ.
ಇದೀಗ ಅಂತಹದ್ದೇವೊಂದು ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಶಾಲಾ ಮಕ್ಕಳು ಸಮವಸ್ತ್ರದಲ್ಲೇ ಶಾಲೆಯ ಬಳಿಯ ಕೊಳವೆಬಾವಿ ಸುತ್ತಲಿನ ಪಾಚಿಗಟ್ಟಿದ ಸ್ಥಳವನ್ನು ಸ್ವಚ್ಚಗೊಳಿಸುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಾಲೆಯ ಮುಖ್ಯೋಪಾಧ್ಯಾಯರೇ ಮಕ್ಕಳಿಗೆ ಸಲಕರಣೆ ಕೊಟ್ಟು ಸ್ವಚ್ಚಗೊಳಿಸಲು ಸೂಚಿಸಲಾಗಿದೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ತಾಲ್ಲೂಕಿನ ಬಿಇಒ ಸೇರಿ ಇನ್ನಿತರರು ಆಗಮಿಸಿ ಪರಿಶೀಲನೆ ನಡೆಸಿದ್ದು, ಶಿಕ್ಷಕರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಶಾಲಾ ವಠಾರದ ಸುತ್ತಮುತ್ತ ಸ್ವಚ್ಚಗೊಳಿಸುವಂತೆ ಮುಖ್ಯೋಪಾಧ್ಯಾಯರೇ ಮಕ್ಕಳಿಗೆ ಸೂಚಿಸಿದ್ದಾರೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ. ಸದ್ಯ ಘಟನೆಗೆ ಸಂಬಂಧಪಟ್ಟಂತೆ ಮುಖ್ಯೋಪಾಧ್ಯಾಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.



