Gruha Lakshmi : ಗೃಹಲಕ್ಷ್ಮೀ ಎರಡು ತಿಂಗಳ ಹಣ ಜಮಾ: ಮಹತ್ವದ ಮಾಹಿತಿ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು,ಏಪ್ರಿಲ್ 15: ಕರ್ನಾಟಕ ಸರ್ಕಾರ ಮಹಿಳೆಯರನ್ನು ಬೆಂಬಲಿಸಲು ಮತ್ತು ಅವರ ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು ಆರಂಭಿಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಒಂದಾಗಿದೆ.
ರಾಜ್ಯದ ಮಹಿಳಾ ಮಣಿಯರ ಖಾತೆಗೆ ಸರ್ಕಾರ ಪ್ರತಿ ತಿಂಗಳು ಬಂದ 2000 ರೂ. ಹಣವನ್ನು ಜಮಾ ಮಾಡುತ್ತಿದೆ. ಈ ಗೃಹ ಲಕ್ಷ್ಮಿ ಹಣವನ್ನ ಕೂಡಿಟ್ಟು ಮಕ್ಕಳ ಶಿಕ್ಷಣಕ್ಕೆ, ಗೃಹ ಬಳಕೆಯ ಉಪಕರಣಗಳ ಖರೀದಿಗೆ ಬಳಕೆ ಮಾಡಿದ ಹಲವಾರು ನಿದರ್ಶನಗಳನ್ನು ನಾವು ನೋಡಿದ್ದೇವೆ. ಮಹಿಳೆಯರಲ್ಲಿ ಸ್ವಾಭಿಮಾನವನ್ನು, ಆರ್ಥಿಕ ಸ್ವಾವಂಬನೆಯನ್ನು ಮೂಡಿಸುವಲ್ಲಿಯೂ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿದೆ. ಸದ್ಯ ಗೃಹ ಲಕ್ಷ್ಮಿ ಹಣವನ್ನ ಸರ್ಕಾರ ಜಮಾ ಮಾಡುತ್ತಿದ್ದು, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹ ಲಕ್ಷ್ಮಿ ಹಣವನ್ನ ಜಮಾ ಮಾಡಬೇಕಿದೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ ಜನವರಿ ತಿಂಗಳ ಹಣವನ್ನ ಮಹಿಳೆಯವರ ಖಾತೆಗೆ ಜಮಾ ಮಾಡಿದ್ದು, ಇದೀಗ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಯಾವಾಗ ಜಮಾ ಆಗಲಿದೆ ಎಂದು ಮಹಿಳೆಯರು ಸರ್ಕಾರವನ್ನ ಪ್ರಶ್ನಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಫೆಬ್ರವರಿ ತಿಂಗಳ ಬಳ ಏಪ್ರಿಲ್ ಎರಡನೇ ವಾರದಂದು ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ಹೇಳಿದ್ರು. ಇದೀಗ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಆದಷ್ಟು ಶೀಘ್ರದಲ್ಲಿ ಮಹಿಳೆಯವರ ಖಾತೆಗೆ ಜಮಾ ಆಗಲಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಜಾತಿಗಣತಿ ವರದಿ ಕುರಿತು ಈಗಲೇ ಚರ್ಚೆ ಸಾಧುವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಏಪ್ರಿಲ್ 17 ರಂದು ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆಯಾಗಲಿದೆ. ತದನಂತರವಷ್ಟೇ ಅದರ ಸಾಧಕ ಬಾಧಕದ ಬಗ್ಗೆ ಚರ್ಚೆ ಮಾಡಿದರೆ ಸೂಕ್ತ. ವೀರಶೈವ ಲಿಂಗಾಯತರಲ್ಲಿ 103 ಉಪ ಪಂಗಡಗಳಿವೆ. ಅದರಲ್ಲಿ ಯಾವುದೇ ಪಂಗಡಗಳಿಗೂ ಅನ್ಯಾಯವಾಗದಂತೆ ಕ್ರಮವಹಿಸಲಾಗುವುದು. ಅನ್ಯ ಸಮುದಾಯಗಳ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು
ಧರ್ಮಾದಾರಿತ ರಾಜಕಾರಣದಲ್ಲಿ ಬೆಳೆದು ಬಂದಿದ್ದು, ನಾಡಿನ ಮಠಾಧೀಶರ ಚಿಂತನೆಗಳನ್ನು, ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸರ್ಕಾರಕ್ಕೆ ದಿಕ್ಸೂಚಿ ಕೊಟ್ಟಿದ್ದು ನಾಡಿನ ಮಠ ಮಾನ್ಯಗಳು, ಸರ್ಕಾರಕ್ಕೆ ಅಕ್ಷರ ದಾಸೋಹ, ಅನ್ನದಾಸೋಹ ಪರಿಕಲ್ಪನೆ ನೀಡಿದ್ದು ನಾಡಿನ ಮಠಗಳು. ಈ ಕಾರ್ಯಗಳಿಂದ ಸರ್ಕಾರ ಪ್ರೇರಣೆಗೊಂಡು ತ್ರಿವಿಧ ದಾಸೋಹವನ್ನು ನಡೆಸಿಕೊಂಡು ಬರುತ್ತಿದೆ ಎಂದು ಸಚಿವರು ಹೇಳಿದರು. ನಮಗೆ ಜಾತಿ ಧರ್ಮ ಗೊತ್ತಿಲ್ಲ. ನಮಗೆ ಗೊತ್ತಿರುವುದು ಎರಡೇ ಜಾತಿ, ಒಂದು ಹೆಣ್ಣು ಮತ್ತೊಂದು ಗಂಡು ಜಾತಿ. 12ನೇ ಶತಮಾನದಲ್ಲೆ ಬಸವಣ್ಣನವರು ಮಹಿಳಾ ಸ್ವಾತಂತ್ರ್ಯದ ಬಗ್ಗೆ ಪ್ರತಿಪಾದಿಸಿದ್ದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಾನು ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಾಡಿನ ಮೂಲೆ ಮೂಲೆಗಳಿಂದ ಮಠಾಧೀಶರು ಆಸ್ಪತ್ರೆಗೆ ಬಂದು ಆಶೀರ್ವದಿಸಿದರು. ಇದನ್ನು ನಾನೆಂದು ಮರೆಯುವುದಿಲ್ಲ. ನಾನೇನು ಅಂಥಹ ಸಾಧನೆ ಮಾಡಿದವಳಲ್ಲ, ಸಂಘರ್ಷದ ಹಾದಿಯಲ್ಲಿ ಬೆಳೆದು ಬಂದವಳು ನಾನು, ನನಗೆ ಮಠಾಧೀಶರು ನೀಡಿದ ಆತ್ಮ ಸ್ಥೈರ್ಯ ಮರೆಯುವಂತಿಲ್ಲ ಎಂದು ಸಚಿವರು ಸ್ಮರಿಸಿದರು. 7 ಕೋಟಿ ಜನಸಂಖ್ಯೆಯ ಕರ್ನಾಟಕದ ಸರ್ಕಾರದಲ್ಲಿ ಏಕೈಕ ಮಹಿಳಾ ಸಚಿವೆಯಾಗಿರುವೆ. 35 ಲಕ್ಷ ಮಕ್ಕಳು, ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರು, ವಿಕಲ ಚೇತನರು, ಹಿರಿಯ ನಾಗರಿಕರು ನನ್ನ ಇಲಾಖೆ ವ್ಯಾಪ್ತಿಯಲ್ಲಿದ್ದಾರೆ. ಅವರ ಮೊಗದಲ್ಲಿ ನಗು ತರುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಅದರಲ್ಲೂ 1.23 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯನ್ನು ಸಮರ್ಕವಾಗಿ ತಲುಪಿಸಲಾಗುತ್ತಿದೆ ಎಂದರು.


