
ಕನ್ನಡ ಎಂದರೆ ನನಗೆ ತುಂಬಾ ಪ್ರೀತಿ ಎನ್ನುತ್ತಿದ್ದ ಖ್ಯಾತ ಗಾಯಕ ಸೋನು ನಿಗಮ್ ಇದೀಗ ಕನ್ನಡಿಗರಿಂದ ವಿರೋಧಕ್ಕೆ ಗುರಿಯಾಗಿದ್ದಾರೆ. ಕನ್ನಡ ಹಾಡು ಕೇಳಿದ್ದಕ್ಕೆ ಇದಕ್ಕೇನೇ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು ಎನ್ನುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.
ಕನ್ನಡ ಹಾಡಿಗೂ ಭಯೋತ್ಪಾದಕರ ದಾಳಿಗೂ ಏನು ಸಂಬಂಧ ಎಂದು ಸೋನು ನಿಗಮ್‌ಗೆ ಕನ್ನಡರಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕೂಡ ಸೋನು ನಿಗಮ್‌ಗೆ ವಾರ್ನಿಂಗ್ ಕೊಟ್ಟಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದ್ದಕ್ಕೆ ಗಾಯಕ ಸೋನು ನಿಗಮ್ ʻಇದಕ್ಕೇನೇ, ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದುʼ ಎಂದು ಹೇಳಿದ್ದಾನೆ. ಕರ್ನಾಟಕ ಪೊಲೀಸರು ಈ ಕೂಡಲೇ ಇವನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ. ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗಲು ಸಾಧ್ಯ? ಕನ್ನಡದ ಅನ್ನ ತಿಂದು ಕೊಬ್ಬಿರುವ ಈತ ಅದು ಹೇಗೆ ಕರ್ನಾಟಕದಲ್ಲಿ ಇನ್ನು ಮೇಲೆ ಶೋಗಳನ್ನು ನಡೆಸುತ್ತಾನೆ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಕನ್ನಡದಲ್ಲಿ ಹಾಡಿಸಬೇಡಿ
ಕರ್ನಾಟಕದ ಯಾವ ಸಿನಿಮಾ ನಿರ್ಮಾಪಕರೂ ಈತನಿಂದ ಕನ್ನಡದ ಹಾಡು ಹಾಡಿಸಬಾರದು. ಯಾವುದೇ ಸಂಸ್ಥೆಗಳು ಇವನ ಶೋ ನಡೆಸಲು ಮುಂದಾಗಬಾರದು. ಒಂದು ವೇಳೆ ಯಾರಾದರೂ ಈ ದುಸ್ಸಾಹಸ ಮಾಡಿದರೆ ಅವರೇ ಬೆಲೆ ತೆರಬೇಕಾಗುತ್ತದೆ ಎಂದೂ ನಾರಾಯಣಗೌಡರು ಎಚ್ಚರಿಕೆ ನೀಡಿದ್ದಾರೆ. ಸೋನು ನಿಗಮ್ ನೀಡಿರುವ ಹೇಳಿಕೆ ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ, ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರನ್ನು ಖಳನಾಯಕರನ್ನಾಗಿ ಮಾಡುವ ಹುನ್ನಾರ ಹೊಂದಿದೆ ಎಂದು ದೂರಿದ್ದಾರೆ.
ಹೀಗಾಗಿ ಸೋನು ನಿಗಮ್ ಮೇಲೆ ಮೇಲೆ ಈ ಕೂಡಲೇ ದೂರು ದಾಖಲಾಗಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ. ಇಂತವರನ್ನು ಕರ್ನಾಟಕದ ನೆಲದಲ್ಲಿ ಅನ್ನ ಹಾಕಿ ಸಾಕುವುದನ್ನು ಇನ್ನು ಮುಂದಾದರೂ ನಾವು ಕೈಬಿಡಬೇಕು ಎಂದು ಕರೆ ನೀಡಿದ್ದಾರೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಸೋನು ನಿಗಮ್ ವಿರುದ್ಧ ಕಿಡಿಕಾರಿದ್ದಾರೆ. ಕನ್ನಡದ ಹಾಡು ಹಾಡಿ ಅಂತ ಕೇಳುವುದಕ್ಕೂ ಪೆಹಲ್ಗಾಮ್ ಘಟನೆಗೂ ಏನು ಸಂಬಂಧ? ಮೂರ್ಖ ಸೋನು ನಿಗಮ್. ಎಷ್ಟೇ ನಿಮಗೆ ಪ್ರೀತಿ ಕೊಟ್ರು ತಿಂದ ತಟ್ಟೆಯಲ್ಲಿ ಉಗುಳೋ ಬುದ್ದಿ ನಿಮ್ಮಂತವರು ಬಿಡೋದಿಲ್ಲ. ಕನ್ನಡ ಕನ್ನಡಿಗರು ಅಂದ್ರೆ ಅಷ್ಟು ಬಿಟ್ಟಿಗೆ ಬಿದ್ದಿದ್ದೀವಾ? ಎಂದು ಪ್ರಶ್ನಿಸಿದ್ದಾರೆ. ಸೋನು ನಿಗಮ್ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು. ಕನ್ನಡ ಚಿತ್ರರಂಗ ಇನ್ನೆಂದೂ ಇವನಿಗೆ ಹಾಡಲು ಅವಕಾಶ ಕೊಡಬೇಡಿ ಎಂದು ಒತ್ತಾಯಿಸಿದ್ದಾರೆ.
ಏನಿದು ವಿವಾದ?
ಬೆಂಗಳೂರಿನ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಕನ್ನಡ ಹಾಡು ಹಾಡುವಂತೆ ಕೇಳಿದ್ದಕ್ಕೆ, ಇದಕ್ಕೇನೆ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು ಎನ್ನುವ ಮೂಲಕ ಕನ್ನಡಿಗರನ್ನು ಅವಮಾನಿಸಿರುವ ಘಟನೆ ನಡೆದಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಬಳಿಕ ನಾನು ಮೊದಲಿನಿಂದಲೂ ನಾನು ಕನ್ನಡ ಹಾಡುಗಳನ್ನು ಹಾಡಿದ್ದೇನೆ, ಅವರು ಕನ್ನಡ ಕನ್ನಡ ಎಂದು ಒತ್ತಾಯ ಮಾಡಿದ್ದಕ್ಕೆ ನನಗೆ ಕೋಪ ಬಂತು. ಕನ್ನಡದ ಮೇಲೆ ನನಗೆ ಅಪಾರ ಗೌರವ ಇದೆ ಎಂದು ಸೋನು ನಿಗಮ್ ಉಲ್ಟಾ ಹೊಡೆದಿದ್ದಾರೆ. ಆದರೂ ಸ್ಯಾಂಡಲ್‌ವುಡ್‌ನಿಂದ ಅವರನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯ ಕೇಳಿಬಂದಿದೆ.