ಬೆಳಗಾವಿ ಜಿಲ್ಲೆಯ ಒಟ್ಟು 15 ಕಡೆಗಳಲ್ಲಿ ಸ್ಕೈ ವಾಕ್ ನಿರ್ಮಾಣ ಮಾಡಲು ಮುಂದಾದ ಮಹಾನಗರ ಪಾಲಿಕೆ

ಬೆಳಗಾವಿ: ದಿನದಿಂದ ದಿನಕ್ಕೆ ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ ವೇಗವಾಗಿ ಬೆಳೆಯುತ್ತಿದೆ. ಅದೇ ರೀತಿ ಮಹಾನಗರದಲ್ಲಿ ಸಂಚಾರ ದಟ್ಟಣೆ ಕೂಡ ಹೆಚ್ಚುತ್ತಿದೆ. ಹಾಗಾಗಿ, ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ರಸ್ತೆ ದಾಟಲು ಪಾದಚಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಮಹಾನಗರ ಪಾಲಿಕೆಯು ಖಾಸಗಿ ಸಹಭಾಗಿತ್ವದಲ್ಲಿ ಸ್ಕೈ ವಾಕ್ ನಿರ್ಮಾಣಕ್ಕೆ ಮುಂದಾಗಿದೆ.
ನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹಾಗಾಗಿ, ಸಾರ್ವಜನಿಕರು ರಸ್ತೆಯ ಮೇಲೆ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದೆಡೆ ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರಿಗೆ ಅಡಚಣೆ ಉಂಟು ಮಾಡಿದೆ. ಜೊತೆಗೆ ಸುಗಮ ಸಂಚಾರಕ್ಕೂ ತೊಂದರೆ ಆಗಿದೆ. ಅಲ್ಲದೇ ಕೆಲ ಭಾಗದಲ್ಲಿ ರಸ್ತೆ ದಾಟಲು ಜನರು ಪರದಾಡುತ್ತಿದ್ದು, ರಸ್ತೆ ದಾಟುವ ಧಾವಂತದಲ್ಲಿ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಆಗಿರುವ ಉದಾಹರಣೆಗಳೂ ಇವೆ. ಇದಕ್ಕೆಲ್ಲಾ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ ಸ್ಕೈ ವಾಕ್ ನಿರ್ಮಾಣಕ್ಕೆ ಚಿಂತನೆ ನಡೆಸಿದೆ.ಮುಖ್ಯ ರಸ್ತೆಗಳು,
ಮಾರುಕಟ್ಟೆ ಪ್ರದೇಶ ಸೇರಿ ಬೆಳಗಾವಿ ನಗರದಲ್ಲಿ ಎಲ್ಲೆಲ್ಲಿ ಸಂಚಾರ ದಟ್ಟಣೆ, ಜನಸಂದಣಿ ಹೆಚ್ಚಿದೆ ಎಂಬ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ. ಇನ್ನು ಅಗಲವಾದ, ಕಿರಿದಾದದ ರಸ್ತೆಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಸಮೀಕ್ಷೆ ಕಾರ್ಯ ನಡೆಸುತ್ತಿದೆ. ಕೆಲ ಭಾಗಗಳಲ್ಲಿ ಸಂಚಾರಿ ಪೊಲೀಸರು, ಆಟೋ ಚಾಲಕರು, ಸ್ಥಳೀಯ ವ್ಯಾಪಾರಿಗಳ, ನಿವಾಸಿಗಳ ಅಭಿಪ್ರಾಯ ಕೂಡ ಪಡೆಯಲಾಗುತ್ತಿದೆ. ನಗರದ ಮುಖ್ಯ ರಸ್ತೆಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಸರಳವಾಗುವಂತೆ ಸ್ಕೈ ವಾಕ್ಗಳನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗುತ್ತಿದೆ.


