State

BIG NEWS : ‘ಸಾಲ ವಸೂಲಿ’ ಮಾಡುವಾಗ ಮಾನವೀಯತೆ ಮರೆತರೆ ಕಠಿಣ ಕ್ರಮ : ಸಾಲ ವಸೂಲಿಗಿಂತ ಜನರ ಜೀವ ಮುಖ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಧಾರವಾಡ : ರೈತರು ಸೇರಿದಂತೆ ಅನೇಕ ಕುಶಲಕರ್ಮಿಗಳು, ಉದ್ಯೋಗಿಗಳು ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಪಡೆಯುತ್ತಾರೆ. ಕೇಲವು ಸಂದರ್ಭಗಳಲ್ಲಿ ಅನಿವಾರ್ಯ ಕಾರಣಗಳಿಂದ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಸಾಧ್ಯವಾಗದೆ ಸುಸ್ಥಿದಾರ ಆಗುತ್ತಾರೆ. ಬ್ಯಾಂಕ್‍ಗಳು ರೈತರಿಂದ ಅಥವಾ ಸುಸ್ಥಿದಾರರಿಂದ ಸಾಲ ವಸೂಲಾತಿಯಲ್ಲಿ ನೈಜ ಕಾರಣ ಪರಿಗಣಿಸಿ, ಮಾನವೀಯತೆ ತೊರಬೇಕು.

ಮರುಪಾವತಿಗೆ ಕಾಲಾವಕಾಶ ನೀಡಬೇಕು. ಸಾಲ ವಸೂಲಿಗಿಂತ ಜನರ ಜೀವ ಮುಖ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಬ್ಯಾಂಕರ್ಸ್‍ಗಳೊಂದಿಗೆ ರೈತ ಆತ್ಮಹತ್ಯೆ ಪ್ರಕರಣಗಳು ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಭೆ ಜರುಗಿಸಿ, ಮಾತನಾಡಿದರು.

ಸಾಲ ವಸೂಲಾತಿಯಲ್ಲಿ ಮಾನವೀಯತೆ ಮೀರಿ ಯಾರೂ ವರ್ತಿಸಬಾರದು. ಜನರ ಜೀವ ಮುಖ್ಯ. ರೈತ ಆತ್ಮಹತ್ಯೆಗಳು ಯಾವ ಕಾರಣಕ್ಕಾಗಿ ಮತ್ತು ಯಾವ ಸಂದರ್ಭಗಳಿಂದ ಘಟಿಸುತ್ತಿವೆ ಎಂಬುವುದರ ಕುರಿತು ಅಧ್ಯಯನ ಮಾಡಲು ಕೃಷಿ ವಿಶ್ವವಿದ್ಯಾಲಯ, ಕಂದಾಯ, ಕೃಷಿ ಇಲಾಖೆ, ಬ್ಯಾಂಕ್ ಅಧಿಕಾರಿ ಹಾಗೂ ಸಾಮಾಜಿಕ ತಜ್ಞರ ಒಳಗೊಂಡ ಸಮಿತಿಯನ್ನು ರಚಿಸಲು ಕ್ರಮವಹಿಸಲಾಗುತ್ತದೆ. ಕೃಷಿ ತಜ್ಞರನ್ನು ಸಹ ಭಾಗಿ ಮಾಡಿಕೊಂಡು ವೈಜ್ಞಾನಿಕವಾಗಿ ಅಧ್ಯಯನವನ್ನು ಮಾಡಲಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ರೈತರ ಮನೆಗಳಿಗೆ ಹೋಗಿ ಸಾಲ ಮರುಪಾವತಿಗಾಗಿ ತಿಳಿವಳಿಕೆ ನೀಡಬೇಕು. ಅವರ ಆರ್ಥಿಕ ಸ್ಥಿತಿ, ಉದ್ಯೋಗ ಬಗ್ಗೆ ತಿಳಿದು ಕಾಲಾವಕಾಶ ನೀಡಬೇಕೆಂದು ಅವರು ಹೇಳಿದರು.

ಕುಂದಗೋಳ ತಾಲೂಕಿನ ಭರದ್ವಾಡ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳ ಮನೆಗಳಿಗೆ ಇಂದು ಭೇಟಿ ನೀಡಿದ್ದೇವೆ. ರೈತರ ಆತ್ಮಹತ್ಯೆಯ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಧಾರವಾಡ ಜಿಲ್ಲೆಯಲ್ಲಿ ಸುಮಾರು ಐವತ್ತು ಸಾವಿರ ಅಕೌಂಟ್‍ಗಳು ಎನ್‍ಪಿ (ಕಾರ್ಯನಿರ್ವಹಿಸದ ಖಾತೆ) ಆಗಿವೆ. ಈ ಎಲ್ಲ ಎನ್.ಪಿ ಬ್ಯಾಂಕ್ ಖಾತೆಗಳನ್ನು ಎ, ಬಿ, ಸಿ ವರ್ಗ ಮಾಡಿಕೊಂಡು ಅತಿಯಾಗಿ ಯಾರು ತೊಂದರೆಯಲ್ಲಿ ಇದ್ದಾರೆ, ಅವರನ್ನು ಪತ್ತೆ ಹಚ್ಚಬೇಕು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಅವರಿಗೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿವೆಯೋ, ಇಲ್ಲವೋ, ಎಂದು ತಿಳಿದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ಹೇಳಿದರು.

ರೈತರ ಏಳಿಗೆಯೇ ನಮ್ಮ ಸರ್ಕಾರದ ಗುರಿ ಆಗಿದೆ. ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ಮತ್ತು ಕೃಷಿ ಉಪಕರಣಗಳು ಲಭ್ಯವಾಗುತ್ತಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕೃಷಿ ಇಲಾಖೆ ಖಾತ್ರಿಪಡಿಸಬೇಕು. ಬೆಳೆ ವಿಮೆ ಯೋಜನೆಯ ಲಾಭ ಪ್ರತಿಯೊಬ್ಬ ಅರ್ಹ ರೈತನಿಗೂ ತಲುಪಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಅಧಿಕಾರಿಗಳೊಂದಿಗೆ ಮಾತನಾಡಿ, ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದ್ದರು. ಯಾವುದೇ ಕುಟುಂಬಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಿ, ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಿ, ನಿಯಮಾನುಸಾರ ಸರ್ಕಾರದಿಂದ ಬರುವ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರ್ಕಾರದಿಂದ ಸಿಗುವ ಪಿಂಚಣಿ, ಪರಿಹಾರ, ಸಹಾಯಧನ ಮುಟ್ಟುವಂತಿಲ್ಲ: ರಾಷ್ಟ್ರೀಕೃತ ಬ್ಯಾಂಕ್, ಯಾವುದೇ ಬ್ಯಾಂಕ್ ಇದ್ದರೂ ಸಹ ಎನ್.ಪಿ ಆಗಿರುವ ಅಕೌಂಟ್‍ಗಳಿಗೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಸಹಾಯಧನ, ಪಿಂಚಣಿ, ಬೆಳೆ ಪರಿಹಾರ, ವಿಮೆ ಪರಿಹಾರ, ಇತರ ಸಾಲ ಸೌಲಭ್ಯಗಳಿಂದ ಯಾವುದೇ ರೀತಿ ಹಣ ಅವರ ಉಳಿತಾಯ ಖಾತೆಗೆ ಬಂದರೂ ಯಾವುದೇ ಕಾರಣಕ್ಕೂ ಬ್ಯಾಂಕ್‍ದವರು ಅದನ್ನು ಸಾಲಕ್ಕೆ ಮರು ಹೊಂದಾಣಿಕೆ ಅಥವಾ ಸಾಲದ ಖಾತೆಗೆ ಜಮೆ ಪಡೆಯುವ ಅವಕಾಶವಿಲ್ಲ. ಮತ್ತು ಈ ರೀತಿ ಕ್ರಮ ವಹಿಸಲು ಬ್ಯಾಂಕ್‍ನವರಿಗೆ ಯಾವುದೇ ರೀತಿ ಕಾನೂನಿನಲ್ಲಿ ಅವಕಾಶವಿಲ್ಲ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿ ಅವರ ಜೊತೆ ಚರ್ಚೆಯನ್ನು ಸಹ ಮಾಡುತ್ತೇನೆ. ಕ್ರಾಪ್ ಲೋನ್ ಆಗಿರಲಿ, ಬೇರೆ ಯಾವುದೇ ರೀತಿಯ ಲೋನ್ ತೆಗೆದುಕೊಂಡರು ಸರ್ಕಾರದ ಸಬ್ಸಿಡಿಗೆ ಅದನ್ನು ಅಟ್ಯಾಚ್ ಮಾಡಬಾರದು ಎಂದು ಸಚಿವ ಸಂತೋಷ ಲಾಡ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆಕೊಟ್ಟರು.

ಸಭೆಯಲ್ಲಿ ಕುಂದಗೋಳ ಶಾಸಕ ಎಂ. ಆರ್. ಪಾಟೀಲ ಅವರು ಮಾತನಾಡಿ, ಸಾಲ ನೀಡಿರುವ ಬ್ಯಾಂಕ್ ಸಿಬ್ಬಂದಿಗಳು ಅನಗತ್ಯವಾಗಿ ರೈತರ ಮನೆಗಳಿಗೆ ಭೇಟಿ ನೀಡಿ, ತಕ್ಷಣ ಸಾಲ ಮರುಪಾವತಿಸಲು ಒತ್ತಾಯಿಸುತ್ತಿದ್ದಾರೆ ಎಂದು ರೈತರು ದೂರು ನೀಡುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ತಾವೇ ಖುದ್ದು ಬ್ಯಾಂಕ್ ಸಿಬ್ಬಂದಿಗಳಿಗೆ ಕರೆ ಮಾಡಿ, ಸಾಲ ಮರುಪಾವತಿಸಲು ಸುಸ್ಥಿದಾರರಿಗೆ ಸಾಕಷ್ಟು ಕಾಲಾವಕಾಶ ನೀಡುವಂತೆ ಸೂಚಿಸಿದ್ದೇನೆ. ರೈತರಿಗೆ ಸರಿಯಾಗಿ ಬೆಳೆ ವಿಮೆ ಸಿಗುತ್ತಿಲ್ಲ. ಸಿಬ್ಬಂದಿಗಳು ಬೆಳೆ ಸಮೀಕ್ಷೆ, ಅನೆವಾರಿ ಮಾಡುವಾಗ ಸರಿಯಾಗಿ ನಿಯಮಗಳನ್ನು ಪಾಲಿಸಬೇಕು. ರೈತರಿಗೆ ಮೂಡಿರುವ ಸಂಶಯ, ಗೊಂದಲಗಳನ್ನು ಇಲಾಖೆಯ ಅಧಿಕಾರಿಗಳು ಸೂಕ್ತ ತಿಳುವಳಿಕೆ ನೀಡಿ, ಪರಿಹರಿಸಬೇಕೆಂದು ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಕೃಷಿ ಮತ್ತು ರೈತರಿಗೆ ನೀಡುವ ಸರ್ಕಾರಿ ಸೌಲಭ್ಯಗಳು ಮತ್ತು ಕಾರ್ಯಕ್ರಮಗಳ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಹಾಗೂ ತಾಲೂಕು ಕೃಷಿಕ ಸಮಾಜದವರು ರೈತರಿಗೆ ತಿಳುವಳಿಕೆ ನೀಡುವಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಬೆಳೆ ವಿಮೆ, ಬೆಳೆ ಪರಿಹಾರ ಮತ್ತು ಬ್ಯಾಂಕ್ ಸೌಲಭ್ಯಗಳ ಕುರಿತು ಗ್ರಾಮ ಸಭೆ ಹಾಗೂ ಗ್ರಾಮಮಟ್ಟದಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರಿ ಆರ್ಥಿಕ ಸೌಲಭ್ಯ ಹಾಗೂ ಇತರ ಪರಿಹಾರಧನಗಳನ್ನು ಯಾವುದೇ ಕಾರಣಕ್ಕೂ ರೈತರ ಸಾಲದ ಖಾತೆಗೆ ಹೊಂದಾಣಿಕೆ ಮಾಡದಂತೆ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಮತ್ತು ಈ ಕುರಿತು ಪ್ರಸ್ತಾವನೆಯನ್ನು ರಾಜ್ಯ ಬ್ಯಾಂಕರ್ಸ್ ಸಮಿತಿ ಹಾಗೂ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಈಗಾಗಲೇ ಸಲ್ಲಿಸಲಾಗಿದೆ. ತಾಂತ್ರಿಕ ಕಾರಣ ಮತ್ತು ಪ್ರಸ್ತುತದಲ್ಲಿರುವ ಬ್ಯಾಂಕ್ ವ್ಯವಹಾರ ವ್ಯವಸ್ಥೆಯಿಂದಾಗಿ ಸರ್ಕಾರದಿಂದ ಬರುವ ಆರ್ಥಿಕ ಸೌಲಭ್ಯಗಳು ಸಾಲದ ಖಾತೆಗೆ ಜಮೆ ಆದರೂ ಅದನ್ನು ಮರಳಿ, ಸಂಬಂಧಪಟ್ಟವರ ಉಳಿತಾಯ ಖಾತೆಗೆ ಮರು ಜಮೆ ಮಾಡುತ್ತಿದ್ದಾರೆ. ಇದು ರಾಷ್ಟ್ರ ವ್ಯಾಪಿಯಾಗಿ ಜಾರಿಯಲ್ಲಿರುವದರಿಂದ ಸರ್ಕಾರದ ಮಟ್ಟದಲ್ಲಿ ತಿದ್ದುಪಡಿಯಾಗಬೇಕೆಂದು ತಿಳಿಸಿದರು.

2020-21 ನೇ ಸಾಲಿನಿಂದ 2025 ರ ಜುಲೈ ತಿಂಗಳವರೆಗೆ ಕಳೆದ ಐದು ವರ್ಷಗಳಲ್ಲಿ ಅಳ್ನಾವರ ತಾಲೂಕಿನಲ್ಲಿ 6, ಅಣ್ಣಿಗೇರಿ ತಾಲೂಕಿನಲ್ಲಿ 28, ಧಾರವಾಡ ತಾಲೂಕಿನಲ್ಲಿ 73, ಕಲಘಟಗಿ ತಾಲೂಕಿನಲ್ಲಿ 38, ಹುಬ್ಬಳ್ಳಿ ತಾಲೂಕಿನಲ್ಲಿ 36, ಹುಬ್ಬಳ್ಳಿ ನಗರದಲ್ಲಿ 3, ಕುಂದಗೋಳ ತಾಲೂಕಿನಲ್ಲಿ 53 ಮತ್ತು ನವಲಗುಂದ ತಾಲೂಕಿನಲ್ಲಿ 77 ರೈತರ ಆತ್ಮಹತ್ಯೆ ಪ್ರಕರಣಗಳಾಗಿವೆ. ಮತ್ತು 2020-21 ನೇ ಸಾಲಿನಲ್ಲಿ 64, 2021-22 ನೇ ಸಾಲಿನಲ್ಲಿ 55, 2022-23 ನೇ ಸಾಲಿನಲ್ಲಿ 64, 2023-24 ನೇ ಸಾಲಿನಲ್ಲಿ 79, 2024-25 ನೇ ಸಾಲಿನ ಮಾರ್ಚವರೆಗೆ 52 ಪ್ರಕರಣಗಳು ದಾಖಲಾಗಿವೆ. ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ನಿಯಮಾನುಸಾರ ಪರಿಹಾರ ವಿತರಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಳೆದ ಐದು ವರ್ಷಗಳಲ್ಲಿನ ಕೆಲವು ಪ್ರಕರಣಗಳಲ್ಲಿ ವಾರಸಾ ಪ್ರಮಾಣ ಪತ್ರ, ಆಧಾರ ಕಾರ್ಡ್‍ದಲ್ಲಿನ ತಾಂತ್ರಿಕ ದೋಷ, ಬಿಬಿಟಿ ತಂತ್ರಾಂಶದಲ್ಲಿ ದೋಷ ಮತ್ತು ವಿಚರಣಾ ಸಮಿತಿ ತಿರ್ಮಾನಿಸಲು ಬಾಕಿ ಇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button