State
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗಲಿಂಗಪ್ಪ ಕರ್ತವ್ಯ ಲೋಪ ಆರೋಪ: ಪಿಡಿಓ ಅಮಾನತು

ಕನಕಗಿರಿ: ತಾಲ್ಲೂಕಿನ ಕರಡೋಣ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗಲಿಂಗಪ್ಪ ಅವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಅವರು ಸೇವೆಯಿಂದ ಅಮಾನತು ಮಾಡಿ ಆ.13ರಂದು ಆದೇಶ ಹೊರಡಿಸಿದ್ದಾರೆ.
ನರೇಗಾ ಯೋಜನೆಯಲ್ಲಿ ನಿಗದಿತ ಗುರಿಗಳನ್ನು ಸಾಧಿಸಿಲ್ಲ ಹಾಗೂ ಹೆಚ್ಚುವರಿ ಕಾಮಗಾರಿಗಳನ್ನು ಆರಂಭಿಸದೆ ಇರುವುದು, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮಂಜೂರಾದ 426 ಗುರಿಗಳಲ್ಲಿ 119 ಮಾತ್ರ ಪ್ರಗತಿ ಮಾಡಿ ಬಡ ಕುಟುಂಬಗಳಿಗೆ ಸರ್ಕಾರದ ಯೋಜನೆಯನ್ನು ತಲುಪಿಸದೆ ಇರುವ ವಿಷಯ ಸೇರಿದಂತೆ ವಿವಿಧ ವಿಷಯಗಳಲ್ಲಿ ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ. ಅಲ್ಲದೆ ಕರವಸೂಲಿಯನ್ನು ಸಮರ್ಪಕವಾಗಿ ಮಾಡಿಲ್ಲ, ಅಧಿಕಾರಿಯ ಕರ್ತವ್ಯದ ನಿರ್ಲಕ್ಷ್ಯದ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರೂ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ಸಲ್ಲಿಸಿದ ವರದಿ ಅನ್ವಯ ನಾಗಲಿಂಗಪ್ಪ ಅವರು ಅಮಾನತುಗೊಂಡಿದ್ದಾರೆ.


