ಒಂದೇ ಸ್ಥಳದಲ್ಲಿ 5 ವರ್ಷ ಸೇವೆ ಸಲ್ಲಿಸಿದ ಪಿಡಿಒಗಳಿಗೆ ವರ್ಗಾವಣೆ ಕಡ್ಡಾಯ :ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಒಂದೇ ಸ್ಥಳದಲ್ಲಿ 5 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಳಿಸಲು ಅವಕಾಶ ಕಲ್ಪಿಸಿದ್ದು, ಸೆ. 10ರಿಂದ 20ರ ವರೆಗೆ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್ ಹಾಗೂ ಸೆ.23 ಹಾಗೂ 24ರಂದು ಸಾಮಾನ್ಯ ಕೋರಿಕೆ ವರ್ಗಾವಣೆಗಳ ಕೌನ್ಸೆಲಿಂಗ್ ಪ್ರಕ್ರಿಯೆಗಳು ನಡೆಯಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಹಿರಿಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಪಿಡಿಒ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ದಿ ಸಹಾಯಕ (ಗ್ರೇಡ್-1 ಗ್ರೇಡ್-2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳ ನಿಯಂತ್ರಣ) ನಿಯಮಗಳು 2024ನ್ನು ರಚಿಸಿ, ಅಧಿಸೂಚಿಸಲಾಗಿದೆ. ಈ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ತಂದು, ಒಂದೇ ಸ್ಥಳದಲ್ಲಿ 5 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪಿಡಿಒಗಳನ್ನು ವರ್ಗಾವಣೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಿಡಿಒಗಳಿಗೆ ಸಂಬಂಧಿಸಿ ಈಗಾಗಲೇ ಆನ್‌ಲೈನ್ ಮೂಲಕ ವಿಶೇಷ ಪ್ರಕರಣಗಳ ಅಡಿಯಲ್ಲಿ 515 ಅರ್ಜಿ ಗಳು ಹಾಗೂ ಸಾಮಾನ್ಯ ಕೋರಿಕೆ ಅಡಿಯಲ್ಲಿ 1,215 ಅರ್ಜಿಗಳು ಸಹಿತ ಒಟ್ಟು 1,730 ಅರ್ಜಿಗಳು ಸ್ವೀಕೃತಗೊಂಡಿವೆ. ಪ್ರಸ್ತುತ ಖಾಲಿ ಹುದ್ದೆಗಳ, ಕಡ್ಡಾಯ ವರ್ಗಾವಣೆಗಳ ರಾಜ್ಯವಾರು ಅಂತಿಮಪಟ್ಟಿ ಹಾಗೂ ವರ್ಗಾವಣೆ ಯಿಂದ ವಿನಾಯತಿಗಾಗಿ ಕೋರಿಕೆ ಸಲ್ಲಿಸಿದವರ ಪಟ್ಟಿಯನ್ನು https://rdprtransfer.karnataka.gov.in/ ನಲ್ಲಿ ಪ್ರಕಟಿಸಲಾಗಿದೆ.
ಆ.29ರಂದು ವಿಶೇಷ ಪ್ರಕರಣಗಳ ಅಂತಿಮ ವರ್ಗಾವಣೆ ಆದ್ಯತಾ ಪಟ್ಟಿಯನ್ನು ಸೆ. 1ರಂದು ಸಾಮಾನ್ಯ ಕೋರಿಕೆ ಮತ್ತು ಕಡ್ಡಾಯ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸೆ. 3ರಿಂದ 8ರ ವರೆಗೆ ವಿಶೇಷ ಪ್ರಕರಣಗಳ ಮೊದಲ ಸುತ್ತಿನ ಕೌನ್ಸೆಲಿಂಗ್ ಹಾಗೂ ಸೆ.8ರಂದು ವಿಶೇಷ ಪ್ರಕರಣಗಳ ಎರಡನೇ ಸುತ್ತಿನ ಕೌನ್ಸೆಲಿಂಗ್ ಕೈಗೊಳ್ಳಲಾಗುತ್ತದೆ ಎಂದರು.
ಪಿಡಿಒ ವರ್ಗಾವಣೆ ಪ್ರಕ್ರಿಯೆಯನ್ನು ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ನಡೆಸುತ್ತಿದ್ದು, ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಜತೆಗೆ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗು ತ್ತದೆ. ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್ – 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಿಗೆ ಸಂಬಂಧಿಸಿ 31 ಜಿಲ್ಲೆಗಳಲ್ಲಿ ಅರ್ಹತೆ ಹೊಂದಿದ 1,300 ನೌಕರರಿಗೆ ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿದ ಜಿ.ಪಂ. ಸಿಇಒಗಳು ಸಹಿ ಮಾಡಿದ ವರ್ಗಾವಣೆ ಆದೇಶ ಗಳನ್ನು ಸ್ಥಳದಲ್ಲೇ ನೌಕರರಿಗೆ ನೀಡಿದೆ ಎಂದರು.


