
ನವದೆಹಲಿ, ಜನವರಿ 16: ದೆಹಲಿ ವಿಧಾನಸಭೆ ಚುನಾವಣೆ-2025ಕ್ಕೆ ಕಾಂಗ್ರೆಸ್ ಪಕ್ಷ 68 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಚುನಾವಣೆಯಲ್ಲಿ ರಾಜ್ಯದ ಆಡಳಿತ ಪಕ್ಷ ಆಮ್ ಆದ್ಮಿ, ಬಿಜೆಪಿ, ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. 15 ವರ್ಷಗಳ ಬಳಿಕ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ಕಾಂಗ್ರೆಸ್ ಪಕ್ಷ ತಂತ್ರ ರೂಪಿಸಿದ್ದು, ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ಕಾಂಗ್ರೆಸ್ ಬುಧವಾರ ರಾತ್ರಿ 5 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ 70 ಕ್ಷೇತ್ರಗಳ ಪೈಕಿ ಪಕ್ಷ 68 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ದೆಹಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಜನವರಿ 17 ಕೊನೆಯ ದಿನವಾಗಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಾರವನ್ನು ಆರಂಭಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೆಯೇ ಪಕ್ಷ ಚುನಾವಣೆಗೆ ಹೋಗಿದೆ. ‘ಇಂಡಿಯಾ’ ಮೈತ್ರಿಕೂಟದ ಯಾವುದೇ ಪಕ್ಷಗಳ ಜೊತೆಯೂ ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡಿಲ್ಲ.
ಅಭ್ಯರ್ಥಿಗಳು: ಕಾಂಗ್ರೆಸ್ ತನ್ನ 4ನೇ ಪಟ್ಟಿಯಲ್ಲಿ ಸುರೇಂದ್ರ ಕುಮಾರ್ (ಬವಾನಾ), ಸುಮೇಶ್ ಗುಪ್ತಾ (ರೋಹಿಣಿ), ರಾಹುಲ್ ಧನಕ್ (ಕರೋಲ್ ಬಾಗ್), ವೀರೇಂದ್ರ ಬಿಧೂರಿ (ತುಘಲಕಾಬಾದ್), ಅರ್ಜುನ್ ಭದಾನ (ಬದರ್‌ಪುರ್) ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದೆ.
ಜನವರಿ 14ರಂದು ಕಾಂಗ್ರೆಸ್ 15, ಡಿಸೆಂಬರ್ 24ರಂದು 26 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ 21 ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಕಾಂಗ್ರೆಸ್ ಪಕ್ಷ ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಮಾಜಿ ಶಾಸಕಿ ಅಲ್ಕಾ ಲಂಬಾ ಸ್ಪರ್ಧೆ ಮಾಡಲಿದ್ದಾರೆ ಎಂದು ಘೋಷಣೆ ಮಾಡಿದೆ.
ದೆಹಲಿಯ ಆಡಳಿತ ಪಕ್ಷ ಎಎಪಿ. 2024ರ ಲೋಕಸಭೆ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ‘ಇಂಡಿಯಾ’ ಮೈತ್ರಿಕೂಟದಲ್ಲಿದ್ದವು. ಆದರೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧೆ ಮಾಡಿವೆ. ಎಎಪಿ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚುನಾವಣೆ ಕುತೂಹಲ ಮೂಡಿಸಿದೆ.
ನವದೆಹಲಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಮಾಜಿ ಸಂಸದ ಸಂದೀಪ್ ದೀಕ್ಷಿತ್, ಜಂಗಪುರದಲ್ಲಿ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ ವಿರುದ್ಧ ಮಾಜಿ ಮೇಯರ್ ಫರ್ಹಾದ್ ಸೂರಿ ಅವರು ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ.
2015, 2020ರ ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯಲ್ಲಿ ಎಎಪಿ ಗೆಲ್ಲುವ ಮೂಲಕ ಕಾಂಗ್ರೆಸ್, ಬಿಜೆಪಿಗೆ ಭಾರೀ ಹೊಡೆತ ನೀಡಿದೆ. ಈ ಬಾರಿ ಎಎಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಕಾಂಗ್ರೆಸ್, ಬಿಜೆಪಿ ಇದನ್ನು ಬಳಕೆ ಮಾಡಿಕೊಂಡು ಅಧಿಕಾರ ಪಡೆಯುವ ಉತ್ಸಾಹದಲ್ಲಿವೆ.