Fact Check: ಕಾರ್ಮಿಕ ಧ್ವನಿ ಡಿಜಿಟಲ್ ಮಿಡಿಯಾ ನ್ಯೂಸ್ ರಶ್ಮಿಕಾ ಮಂದಣ್ಣ ಆರೋಗ್ಯ ಸ್ಥಿತಿ ಗಂಭೀರ?: ವೈರಲ್ ಫೋಟೋದ ಸತ್ಯಾಂಶ ಏನು?

ಸ್ಯಾಂಡಲ್ವುಡ್ನ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. “ಪುಷ್ಪ” ಮತ್ತು “ಅನಿಮಲ್” ಸಿನಿಮಾದಿಂದ ಸಾಕಷ್ಟು ಪ್ರಸಿದ್ಧಿ ಪಡೆದ ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಶ್ಮಿಕಾ ಅವರು ತಮ್ಮ ದೇಹದ ಮೇಲೆ ಎಲೆಕ್ಟ್ರೋಡ್‌ಗಳು ಮತ್ತು ತಲೆಯ ಮೇಲೆ ಬ್ಯಾಂಡೇಜ್‌ಗಳನ್ನು ಹಾಕಿಕೊಂಡು ಹಾಸಿಗೆಯಲ್ಲಿ ಮಲಗಿರುವ ಆಘಾತಕಾರಿ ಫೋಟೋ ವೈರಲ್ ಆಗಿದೆ. ಹಠಾತ್ ಅನಾರೋಗ್ಯದ ನಂತರ ಮಂದಣ್ಣ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ ಎಂದು ಅನೇಕ ಬಳಕೆದಾರರು ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ”ಆಘಾತಕಾರಿ ಆರೋಗ್ಯ ತುರ್ತು ಪರಿಸ್ಥಿತಿ: ಹಠಾತ್ ಅನಾರೋಗ್ಯದ ನಂತರ ರಶ್ಮಿಕಾ ಮಂದಣ್ಣ ಅವರ ಸ್ಥಿತಿ ಗಂಭೀರ!” ಎಂದು ಬರೆದುಕೊಂಡಿದ್ದಾರೆ.
Fact Check:
ಈ ಪೋಸ್ಟ್ನ ಸತ್ಯಾಸತ್ಯತೆಯನ್ನು ಕಾರ್ಮಿಕ ಧ್ವನಿ ಡಿಜಿಟಲ್ ಮಿಡಿಯಾ ನ್ಯೂಸ್ ಪರಿಶೋದಿಸಿದಾಗ ಸುಳ್ಳು ಫೋಟೋ ಹಾಗೂ ಹೇಳಿಕೆಯೊಂದಿಗೆ ಇದು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಫೋಟೋದ ನಿಜಾಂಶವನ್ನು ತಿಳಿಯಲು ನಾವು, ರಶ್ಮಿಕಾ ಮಂದಣ್ಣ ಅವರ ಆರೋಗ್ಯ ಸಮಸ್ಯೆಗಳ ಬಗ್ಗೆ ಯಾವುದಾದರು ಮಾಧ್ಯಮಗಳು ವರದಿ ಮಾಡಿವೆಯೇ ಎಂದು ಕಂಡುಹಿಡಿಯಲು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ, ರಶ್ಮಿಕಾ ಮಂದಣ್ಣ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಥವಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಇಷ್ಟು ಗಂಭೀರ ಪರಿಸ್ಥಿತಿಯಲ್ಲಿ ರಶ್ಮಿಕಾ ಇರುತ್ತಿದ್ದರೆ ಈ ಸುದ್ದಿ ಮುಖ್ಯವಾಹಿನಿಯಲ್ಲಿ ಬ್ರೇಕಿಂಗ್ ನ್ಯೂಸ್ ಆಗಿರುತ್ತಿತ್ತು.
ಹೀಗಾಗಿ ಇದು ರಶ್ನಿಕಾ ಮಂದಣ್ಣ ಅವರ ಫೋಟೋ ಅಲ್ಲ ಎಂಬುದು ಖಚಿತವಾಯಿತು. ಬಳಿಕ ಈ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಜುಲೈ 07, 2019 ರ ಡೈಲಿ ಮೇಲ್‌ನ ಲೇಖನ ಸಿಕ್ಕಿದೆ. ಮೂಲ ಚಿತ್ರದಲ್ಲಿ ಇರುವುದು ರಶ್ಮಿಕಾ ಮಂದಣ್ಣ ಅಲ್ಲ ಬದಲಾಗಿ ಬ್ರಿಟಿಷ್ ಟಿವಿ ನಿರೂಪಕಿ ನಿಕ್ಕಿ ಚಾಪ್ಮನ್ ಆಗಿದ್ದಾರೆ. ಲಂಡನ್‌ನ ಚಾರಿಂಗ್ ಕ್ರಾಸ್ ಆಸ್ಪತ್ರೆಯಲ್ಲಿ ಚಾಪ್ಮನ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾಗ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ.
ರಶ್ಮಿಕಾ ಮಂದಣ್ಣ ಮತ್ತು ಬ್ರಿಟಿಷ್ ಟಿವಿ ನಿರೂಪಕಿ ನಿಕ್ಕಿ ಚಾಪ್ಮನ್.
ಎರಡೂ ಚಿತ್ರಗಳ ಹೋಲಿಕೆ ಮಾಡಿದಾಗ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಚಾಪ್‌ಮನ್ ದೇಹದ ಮೇಲೆ ಡಿಜಿಟಲ್ ರೂಪದಲ್ಲಿ ಅಳವಡಿಸಲಾಗಿದೆ ಎಂದು ಸ್ಪಷ್ಟವಾಗುತ್ತದೆ. ಇದಲ್ಲದೆ, ವೈರಲ್ ಪೋಸ್ಟ್‌ನಲ್ಲಿರುವ ಅಲ್ಲು ಅರ್ಜುನ್, ಮಹೇಶ್ ಬಾಬು ಮತ್ತು ವಿಜಯ್ ದೇವರಕೊಂಡ ಅವರ ಫೋಟೋಗಳನ್ನು ತೆಲುಗು ಹಿರಿಯ ನಟ-ಚಲನಚಿತ್ರ ನಿರ್ಮಾಪಕ, ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ತೆಗೆದಿದ್ದಾಗಿದೆ.
ಯಾವುದಕ್ಕೂ ನಾವು ರಶ್ಮಿಕಾ ಮಂದಣ್ಣ ಅವರ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸಿದ್ದೇವೆ. ಆಗ ಜನವರಿ 11 ರಂದು ರಶ್ಮಿಕಾ ಮಂದಣ್ಣ ತಮ್ಮ ಗಾಯಗೊಂಡ ಕಾಲಿನ ಫೋಟೋಗಳನ್ನು ಹಂಚಿಕೊಂಡಿರುವುದು ಸಿಕ್ಕಿದೆ. ಜಿಮ್ ವರ್ಕೌಟ್ ಮಾಡುವಾಗ ಗಾಯಗೊಳಿಸಿಕೊಂಡಿದ್ದೇನೆ ಮತ್ತು ಮುಂಬರುವ ವಾರಗಳು ಅಥವಾ ತಿಂಗಳುಗಳಲ್ಲಿ ಚೇತರಿಸಿಕೊಳ್ಳುತ್ತೇನೆ ಎಂದು ಅವರು ಬರೆದಿದ್ದಾರೆ. ಆದರೆ, ಈ ಫೋಟೋಕ್ಕೂ ವೈರಲ್ ಫೋಟೋಕ್ಕೂ ಯಾವುದೇ ಸಂಬಂಧವಿಲ್ಲ.
ರಶ್ಮಿಕಾ ಮಂದಣ್ಣ ಅವರು ಹಿಂದಿಯಲ್ಲಿ ಗುಡ್ಬೈ ಹಾಗೂ ಮಿಷನ್ ಮಜ್ನು ಸಿನಿಮಾಗಳನ್ನು ಮಾಡಿದ್ದಾರೆ. ಇದು ಅವರ ಬಾಲಿವುಡ್ ಜರ್ನಿಗೆ ಸಾಕಷ್ಟು ಮೈಲೇಜ್ ನೀಡಿದೆ. ಹಿಂದಿ ನಿರ್ಮಾಪಕರು ರಶ್ಮಿಕಾ ಅವರ ಕಾಲ್ಶೀಟ್ ಪಡೆಯಲು ರೇಸ್ನಲ್ಲಿ ಇದ್ದಾರೆ. ಅವರು ವಿಕ್ಕಿ ಕೌಶಲ್ ಜೊತೆ ಛಾವಾ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಮರಾಠ ದೊರೆ ಛತ್ರಪತಿ ಶಿವಾಜಿ ಪುತ್ರ ಸಾಂಭಾಜಿ ಮಹರಾಜನ ಪಾತ್ರದಲ್ಲಿ ವಿಕ್ಕಿ ನಟಿಸಿದ್ದಾರೆ. ನಟಿ ರಶ್ಮಿಕಾ ಅವರು ಸಾಂಭಾಜಿ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಛಾವಾ ಫೆಬ್ರವರಿ 14ರಂದು ರಿಲೀಸ್ ಆಗಲಿದೆ. ಲಕ್ಷ್ಮಣ ಉಟೇಕರ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ.