ಹೊಸ ಮಸೂದೆಯಲ್ಲಿ ಏನಿದೆ? ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಆರು ದಶಕಗಳಷ್ಟು ಹಳೆಯದಾಗಿರುವ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ ಹೊಸ ಮಸೂದೆಯನ್ನು ಮಂಡಿಸಿದ್ದಾರೆ. ಅಲ್ಲದೆ ಮಸೂದೆ ಪರಿಶೀಲನೆಗೆ ಸಂಸದೀಯ ಸಮಿತಿ (ಕಮಿಟಿ ಆಫ್ ಹೌಸ್) ರಚಿಸುವಂತೆ ಲೋಕಸಭಾ ಸ್ಪೀಕರ್ ಅವರನ್ನು ಕೋರಿದ್ದಾರೆ.
ವಿಪಕ್ಷಗಳು ಮಸೂದೆಯನ್ನು ವಿರೋಧಿಸಿದರೂ ಲೋಕಸಭೆಯು ಧ್ವನಿ ಮತದ ಮೂಲಕ ಮಸೂದೆ ಮಂಡನೆಗೆ ಒಪ್ಪಿಗೆ ನೀಡಿತು. 1961ರ ಆದಾಯ ತೆರಿಗೆ ಕಾಯ್ದೆ ರದ್ದುಗೊಂಡು, ಈ ಹೊಸ ಮಸೂದೆ ಜಾರಿಗೊಳ್ಳಲಿದೆ. ಹೊಸ ಮಸೂದೆಗೆ ಅಂಗೀಕಾರ ಸಿಕ್ಕಿದ ಬಳಿಕ ಅದು “ಆದಾಯ ತೆರಿಗೆ ಕಾಯ್ದೆ 2025′ ಎಂಬ ಹೆಸರಿನಲ್ಲಿ 2026ರಿಂದ ಜಾರಿಯಾಗಲಿದೆ.
ಮಸೂದೆ ಮಂಡಿಸಿದ ವಿತ್ತ ಸಚಿವೆ ಸೀತಾರಾಮನ್ ಅವರು, ಮಸೂದೆ ಪರಿಶೀಲನೆಗೆ ಸಮಿತಿಯನ್ನು ರಚಿಸಬೇಕು. ಸಮಿತಿಯಲ್ಲಿ ಯಾರ್ಯಾರು ಇರಬೇಕು ಎಂಬ ನಿರ್ಧಾರವನ್ನು ಲೋಕಸಭಾ ಸ್ಪೀಕರ್ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಮಿತಿಯು ಮುಂದಿನ ಅಧಿವೇಶನದ ಮೊದಲ ದಿನವೇ ಅಂದರೆ ಮಾ. 10ರಂದು ತನ್ನ ವರದಿಯನ್ನು ಸಲ್ಲಿಸಬೇಕಾಗುತ್ತದೆ.
ಐಟಿಆರ್ ಫೈಲಿಂಗ್ ಅವಧಿ ವಿಸ್ತರಣೆ
ನವೀಕರಿಸಿದ ಐಟಿಆರ್ ಸಲ್ಲಿಕೆ (ಅಪ್‌ಡೇಟೆಡ್ ರಿಟರ್ನ್ಸ್) ಅವಧಿಯನ್ನು 1 ವರ್ಷದಿಂದ 4 ವರ್ಷಕ್ಕೆ ಹೆಚ್ಚಿಸಲಾಗಿದೆ. ಇದು ತೆರಿಗೆದಾರರು ಮಾಡುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನೆರವಾಗಲಿದೆ. ಐಟಿ ನೀತಿಗೆ ಸಂಬಂಧಿಸಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಅಲ್ಲದೆ ತೆರಿಗೆಗಳನ್ನೂ ಬದಲಿಸಿಲ್ಲ.
ತೆರಿಗೆ ವರ್ಷ ಪರಿಚಯ
ಸಂಕೀರ್ಣವಾಗಿದ್ದ “ಹಿಂದಿನ ವರ್ಷ’ (ಪ್ರೀವಿಯಸ್ ಇಯರ್) ಮತ್ತು “ಮೌಲ್ಯಮಾಪನ ವರ್ಷ’ (ಅಸೆಸ್‌ಮೆಂಟ್ ಇಯರ್) ಪದಗಳ ಬದಲಿಗೆ “ತೆರಿಗೆ ವರ್ಷ’ (ಟ್ಯಾಕ್ಸ್ ಇಯರ್) ಪರಿಚಯಿಸಲಾಗಿದೆ. ಸದ್ಯ ನಾವು ಹಿಂದಿನ ವರ್ಷ ಗಳಿಸಿದ ಆದಾಯದ ಮೇಲೆ ಮೌಲ್ಯಮಾಪನ ವರ್ಷದಲ್ಲಿ ತೆರಿಗೆ ಪಾವತಿಸುತ್ತೇವೆ. ಇದು ಸಂಕೀರ್ಣವಾಗಿದ್ದು, ಬದಲಿಗೆ “ತೆರಿಗೆ ವರ್ಷ’ ಎಂದು ಪರಿಚಯಿಸಲಾಗಿದೆ.
ಹೊಸ ಮಸೂದೆ ಸರಳ
ಹೊಸ ಮಸೂದೆಯು ಸರಳವಾಗಿದ್ದು, ಸುಲಭದಲ್ಲಿ ಅರ್ಥವಾಗುವಂತಿದೆ. 622 ಪುಟಗಳ ಈ ಮಸೂದೆ 536 ನಿಬಂಧನೆಗಳು, 23 ಅಧ್ಯಾಯಗಳು, 16 ಶೆಡ್ನೂಲ್‌ಗಳನ್ನು ಒಳಗೊಂಡಿದೆ. 18 ಟೇಬಲ್‌ಗಳ ಬದಲಿಗೆ 57 ಟೇಬಲ್‌ಗಳಿದ್ದು, ಹಳೆಯ ಕಾಯ್ದೆಯ 1,200 ನಿಬಂಧನೆಗಳು ಮತ್ತು 900 ವಿವರಣೆಗಳನ್ನು ತೆಗೆಯಲಾಗಿದೆ. ಈಗ ಚಾಲ್ತಿಯಲ್ಲಿರುವ ಕಾಯ್ದೆಯು 823 ಪುಟಗಳನ್ನು ಹೊಂದಿದ್ದು, 298 ವಿಭಾಗಗಳು, 23 ಅಧ್ಯಾಯಗಳು ಮತ್ತು 14 ಶೆಡ್ನೂಲ್‌ಗಳನ್ನು ಒಳಗೊಂಡಿದೆ. ಹೊಸ ಆದಾಯ ತೆರಿಗೆ ಮಸೂದೆಯಲ್ಲಿ 2.6 ಲಕ್ಷ ಪದಗಳಿದ್ದು, ಇದು ಹಳೆ ಕಾಯ್ದೆಗಿಂತ 5.12 ಲಕ್ಷ ಪದ ಕಡಿಮೆಯಾಗಿದೆ.
ಹೊಸ ಮಸೂದೆಯಲ್ಲಿ ಏನಿದೆ?
– ಭಾಷೆ ಸರಳ, ಅನಗತ್ಯ ನಿಬಂಧನೆಗಳಿಲ್ಲ. ಸಂಕ್ಷಿಪ್ತ ವಾಕ್ಯಗಳನ್ನು ಒಳಗೊಂಡಿದೆ.
– ಯಾವುದೇ ಹೆಚ್ಚುವರಿ ತೆರಿಗೆಗಳನ್ನು ಪರಿಚಯಿಸಿಲ್ಲ. ಈಗಿರುವ ತೆರಿಗೆ ನಿಬಂಧನೆಗಳ ಕ್ರೋಡೀಕರಣ
– ತೆರಿಗೆದಾರರ ಹಕ್ಕುಗಳು ಮತ್ತು ಜವಾಬ್ದಾರಿಗಳ ಸ್ಪಷ್ಟ ಚಿತ್ರಣ ಸೇರ್ಪಡೆ
– ಮಾರುಕಟ್ಟೆ ಸಂಬಂಧಿ ಹೂಡಿಕೆಯ ಬಂಡವಾಳ ಲಾಭ (ಕ್ಯಾಪಿಟಲ್ ಗೇನ್ಸ್) ಲೆಕ್ಕಾಚಾರಕ್ಕೆ ವಿಶೇಷ ನಿಬಂಧನೆ ಸೇರ್ಪಡೆ
– ಪ್ರಮಾಣಿತ ಕಡಿತ ( ಸ್ಟ್ಯಾಂಡರ್ಡ್ ಡಿಡಕ್ಷನ್), ಗ್ರಾಚುಯಿಟಿ ಮತ್ತು ರಜೆ ನಗದು ಸಹಿತ ಸಂಬಳ ಕಡಿತ ಒಂದೇ ವಿಭಾಗದಲ್ಲಿ ಸೇರ್ಪಡೆ. ಹಳೆಯ ಕಾಯ್ದೆಯಲ್ಲಿ ಅನೇಕ ವಿಭಾಗಗಳಲ್ಲಿ ಹಂಚಿಕೆ
– ಹೆಚ್ಚು ಸ್ಪಷ್ಟತೆಗಾಗಿ “ಆದಾಗ್ಯೂ’ (ನಾಟ್‌ವಿತ್ ಸ್ಟ್ಯಾಡಿಂಗ್) ಬದಲಿಗೆ “ಲೆಕ್ಕಿಸದೆ’ (ಇರ್‌ರೆಸ್ಪೆಕ್ಟಿವ್) ಪದ ಬಳಕೆ.
ಪರಿಶೀಲನೆಗಾಗಿ ಪ್ರತ್ಯೇಕ ಸಮಿತಿಗೆ
ಆದಾಯ ತೆರಿಗೆ ಕಾಯ್ದೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಶೀಲನೆಗಾಗಿ ಪ್ರತ್ಯೇಕ ಸಮಿತಿಯೊಂದಕ್ಕೆ ವಹಿಸಲಾಗಿದೆ. ಲೋಕಸಭೆಯಲ್ಲಿ ಮಂಡಿಸಲಾಗುವ ಮಸೂದೆಗಳನ್ನು ಈ ಮೊದಲು ಜಂಟಿ ಸಂಸದೀಯ ಸಮಿತಿಗೆ ಪರಿಶೀಲನೆಗಾಗಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೇಂದ್ರ ಸರಕಾರವೇ ಆಯ್ಕೆ ಮಾಡಿರುವ ಸಮಿತಿಗೆ ಈ ಮಸೂದೆಯನ್ನು ನೀಡಲಾಗಿದೆ. ಪ್ರಸ್ತಾವಿತ ಬದಲಾವಣೆಗಳಲ್ಲಿ ತಿದ್ದುಪಡಿಗಳಿದ್ದರೆ, ಅದನ್ನು ಪೂರೈಸಿ ಮುಂದಿನ ಅಧಿವೇಶನದೊಳಗೆ ಸಂಸತ್ತಿಗೆ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.



