Delhi Assembly Elections: ದೆಹಲಿ ಚುನಾವಣೆಗೆ 29 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದ BJP; ಮಾಜಿ ಮುಖ್ಯಮಂತ್ರಿಗಳ ಪುತ್ರರಿಗೂ ಟಿಕೆಟ್!

ಅತಿಶಿ ವಿರುದ್ಧ ಬಿಜೆಪಿ ಮಾಜಿ ಸಂಸದ ಕಣಕ್ಕೆ
ಶಾಲಿಮಾರ್ ಬಾಗ್‌ನಿಂದ ರೇಖಾ ಗುಪ್ತಾ, ನಂಗ್ಲೋಯ್ ಜಾಟ್‌ನಿಂದ ಮನೋಜ್ ಶೌಕೀನ್, ಪವನ್ ಶರ್ಮಾ ಮತ್ತು ಕರಮ್ ಸಿಂಗ್ ಕರ್ಮಾ ಸೇರಿದಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಹಲವು ಹಳೆಯ ಅಭ್ಯರ್ಥಿಗಳಿಗೆ ಪಕ್ಷವು ಮತ್ತೆ ಟಿಕೆಟ್ ನೀಡಿದೆ. ಬಿಜೆಪಿ ನಜಾಫ್‌ಗಢದಿಂದ ನೀಲಂ ಪೆಹಲ್ವಾನ್ ಅವರನ್ನು ಕಣಕ್ಕಿಳಿಸಿದೆ. ಕಲ್ಕಾಜಿಯಲ್ಲಿ ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಬಿಜೆಪಿ ಮಾಜಿ ಸಂಸದ ರಮೇಶ್ ಬಿಧುರಿ ಅವರನ್ನು ಕಣಕ್ಕಿಳಿಸಿತು ಮತ್ತು ಎಎಪಿ ಮೌಲ್ಯಗಳು ಮತ್ತು ತತ್ವಗಳನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಕೈಲಾಶ್ ಗಹ್ಲೋಟ್‌ಗೆ ಟಿಕೆಟ್ ನೀಡಲಾಗಿದೆ.
ಎಎಪಿ ಮಾಜಿ ನಾಯಕನಿಗೆ ಬಿಜೆಪಿ ಟಿಕೆಟ್
ಕಟ್ಟರ್ ಹಿಂದುತ್ವ ರಾಜಕಾರಣಕ್ಕೆ ಹೆಸರಾದ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕ ಕಪಿಲ್ ಮಿಶ್ರಾ ಅವರಿಗೆ ಪಕ್ಷವು ಕರವಾಲ್ ನಗರದಿಂದ ಟಿಕೆಟ್ ನೀಡಿದೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್‌ಲಾಲ್ ಖುರಾನಾ ಅವರ ಪುತ್ರ ಹರೀಶ್ ಖುರಾನಾ ಅವರನ್ನು ಮೋತಿ ನಗರ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ.
ಎಲ್ಲ ಸಮುದಾಯಗಳನ್ನು ಓಲೈಸುವ ಪ್ರಯತ್ನ
ದೆಹಲಿ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಯವರೆಗೆ ಬಿಜೆಪಿ 58 ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು ಬಿಜೆಪಿ ಅಭ್ಯರ್ಥಿಗಳ ಜಾತಿ ಸಮೀಕರಣವನ್ನು ನೋಡಿದರೆ, 9 ಜಾಟರು ಮತ್ತು 8 ಬ್ರಾಹ್ಮಣರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅದೇ ರೀತಿ, 3 ಗುರ್ಜಾರ್ ಮತ್ತು 7 ಪಂಜಾಬಿಗಳಿಗೆ ಟಿಕೆಟ್ ನೀಡಲಾಗಿದ್ದು, ಈ ಪೈಕಿ 2 ಸಿಖ್ಖರು, 7 ಬನಿಯಾ ಸಮುದಾಯದವರು ಇದ್ದಾರೆ. ಬಿಜೆಪಿಯ ಎರಡನೇ ಪಟ್ಟಿಯಲ್ಲೂ 5 ಮಹಿಳೆಯರಿದ್ದಾರೆ. ಹಾಗೆ ನೋಡಿದರೆ ಪಕ್ಷ ಎಲ್ಲ ಸಮುದಾಯಗಳನ್ನು ಓಲೈಸುವ ಪ್ರಯತ್ನ ಮಾಡಿದೆ.
ಫೆಬ್ರವರಿ 5 ರಂದು ಮತದಾನ
ದೆಹಲಿ ಚುನಾವಣೆಗೆ ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಮತಗಳ ಎಣಿಕೆ ನಡೆಯಲಿದೆ. ದೆಹಲಿಯ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ರಾಷ್ಟ್ರ ರಾಜಧಾನಿ 1,55,24,858 ಮತದಾರರನ್ನು ಹೊಂದಿದೆ. ಅಕ್ಟೋಬರ್ 29, 2024 ರ ಮತದಾರರ ಕರಡು ಪ್ರಕಟಣೆಯ ನಂತರ ಈ ಸಂಖ್ಯೆಯು ಶೇಕಡಾ 1.09 ರಷ್ಟು ಹೆಚ್ಚಾಗಿದೆ. ದೆಹಲಿಯು 70 ಕ್ಷೇತ್ರಗಳನ್ನು ಹೊಂದಿದೆ (58 ಸಾಮಾನ್ಯ ಮತ್ತು 12 ಎಸ್‌ಸಿ ಸ್ಥಾನಗಳು).
ಎಎಪಿ 2015 ರಿಂದ ರಾಷ್ಟ್ರ ರಾಜಧಾನಿಯಲ್ಲಿ ಬಹುಮತದ ಸರ್ಕಾರವನ್ನು ನಡೆಸಿದೆ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಭರ್ಜರಿ ಜಯ ಸಾಧಿಸಿದೆ. ಆದಾಗ್ಯೂ, ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಹಿನ್ನಡೆಯನ್ನು ಎದುರಿಸಿದ್ದು, 2014 ರಿಂದ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿದೆ. ಮುಂಬರುವ ಚುನಾವಣೆಗಳು ಎಎಪಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ತೀವ್ರ ಚುನಾವಣಾ ಹೋರಾಟಕ್ಕೆ ಸಾಕ್ಷಿಯಾಗಲಿವೆ.



