ಗ್ರಾಮಸಭೆ ನಿರ್ಣಯಕ್ಕೂ ಬೆಲೆ ನೀಡದ ಅಧಿಕಾರಿಗಳು: ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ಲಕಟ್ಟಿ ಗ್ರಾಮದಲ್ಲಿರುವ ಅಕ್ರಮ ಮದ್ಯದಂಗಡಿ ಹಾವಳಿ:
'ದುರ್ಗಾ ಬಾರ್ ಅಂಡ್ ರೆಸ್ಟೋರೆಂಟ್' ಮುಚ್ಚದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ. ಅಬಕಾರಿ ನಿರೀಕ್ಷಕರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣಿದ್ದು ಕೃಷಿಕರಂತೆ ವರ್ತಿಸುತ್ತಿದ್ದಾರೆ.

ಕಾರ್ಲಕಟ್ಟಿಯಲ್ಲಿ ಅಕ್ರಮ ಮದ್ಯದಂಗಡಿ ಹಾವಳಿ:
ಯುವ ಕರ್ನಾಟಕ ಭೀಮಸೇನೆಯಿಂದ ಪ್ರತಿಭಟನಾ ರ್ಯಾಲಿ!!!* ಕಾರ್ಲಕಟ್ಟಿಯಲ್ಲಿ ಅಕ್ರಮ ಬಾರ್ ಬಂದ್ಗೆ ಆಗ್ರಹ
* ಬೆಳಗಾವಿ ಡಿಸಿ ಕಚೇರಿಗೆ ಭೀಮಸೇನೆ ರ್ಯಾಲಿ
* ಗ್ರಾಮಸಭೆ ನಿರ್ಣಯಕ್ಕೂ ಬೆಲೆ ನೀಡದ ಅಧಿಕಾರಿಗಳು
* ಬಾರ್ ಮುಚ್ಚದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಸವದತ್ತಿ ತಾಲೂಕಿನ ಕಾರ್ಲಕಟ್ಟಿ ಗ್ರಾಮದಲ್ಲಿ ನಿಯಮ ಬಾಹಿರವಾಗಿ ನಡೆಯುತ್ತಿರುವ ‘ ಬಾರ್ ಅಂಡ್ ರೆಸ್ಟೋರೆಂಟ್’ ತಕ್ಷಣವೇ ಬಂದ್ ಮಾಡುವಂತೆ ಆಗ್ರಹಿಸಿ ಯುವ ಕರ್ನಾಟಕ ಭೀಮಸೇನೆ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ರ್ಯಾಲಿ ನಡೆಸಿ ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ಲಕಟ್ಟಿ ಗ್ರಾಮದಲ್ಲಿರುವ ಸರ್ವೆ ನಂಬರ್ 58ರ ಅಕ್ರಮ ‘ದುರ್ಗಾ ಬಾರ್ ಅಂಡ್ ರೆಸ್ಟೋರೆಂಟ್’ ನಿಂದಾಗಿ ಸ್ಥಳೀಯ ಪರಿಶಿಷ್ಟ ಜಾತಿ, ಪಂಗಡದ ಯುವಕರು, ಮಕ್ಕಳು ಹಾಗೂ ಸಾರ್ವಜನಿಕರು ಪ್ರತಿದಿನ ಮದ್ಯದ ಚಟಕ್ಕೆ ಬಿದ್ದು ತೊಂದರೆ ಅನುಭವಿಸುವಂತಾಗಿದೆ. ಈ ಅಕ್ರಮ ಮದ್ಯದಂಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಬೇಕೆಂದು ಅಕ್ಟೋಬರ್ 2ರ ಮಹಾತ್ಮಾ ಗಾಂಧಿ ಜಯಂತಿಯಂದು ನಡೆದ ಗ್ರಾಮಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ, ಯಾವುದೇ ಭೂ ಪರಿವರ್ತನೆ (Conversion) ಪಡೆಯದೇ ಮತ್ತು ಸರ್ಕಾರದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅನಧಿಕೃತವಾಗಿ ಈ ಬಾರ್ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ಗ್ರಾಮಸ್ಥರು ನೂರಕ್ಕೆ ನೂರರಷ್ಟು ವಿರೋಧ ವ್ಯಕ್ತಪಡಿಸಿದ್ದರೂ ಅಬಕಾರಿ ನಿರೀಕ್ಷಕರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣಿದ್ದು ಕೃಷಿಕರಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿರುವ ಯುವ ಕರ್ನಾಟಕ ಭೀಮಸೇನೆಯ ರಾಜ್ಯ ಅಧ್ಯಕ್ಷರಾದ ಪ್ರವೀಣ್ ಆರ್. ಮದರ್, ಕೂಡಲೇ ಈ ಅಕ್ರಮ ಬಾರ್ ಅನ್ನು ಬಂದ್ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಯುವ ಕರ್ನಾಟಕ ಭೀಮಸೇನೆ ವತಿಯಿಂದ ಜಿಲ್ಲಾದ್ಯಂತ ನಿರಂತರ ಮತ್ತು ಉಗ್ರ ಹೋರಾಟ ರೂಪಿಸುವುದಾಗಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಕಾರ್ಲಕಟ್ಟಿ ಗ್ರಾಮಸ್ಥರು ಹಾಗೂ ಯುವ ಕರ್ನಾಟಕ ಭೀಮಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.


