ವೈದ್ಯ ವಿದ್ಯಾರ್ಥಿನಿ ಫೋಟೊ ಇಟ್ಟುಕೊಂಡು ಬ್ಲ್ಯಾಕ್ಮೇಲ್: ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು

ಹುಬ್ಬಳ್ಳಿ: ನಗರದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ಆನ್‌ಲೈನ್‌ನಲ್ಲಿ ಪರಿಚಿತನಾದ ಯುವಕನೊಂದಿಗೆ ವಿವಸ್ತ್ರಳಾಗಿ ವಾಟ್ಸ್‌ಆ್ಯಪ್ ಚಾಟ್, ವಿಡಿಯೋ ಕಾಲ್ ಮಾಡಿದ್ದನ್ನೇ ದುರುಪಯೋಗ ಪಡಿಸಿಕೊಂಡ ವ್ಯಕ್ತಿ, ನಕಲಿ ಖಾತೆ ಸೃಷ್ಟಿಸಿ ಮಾನ ಹರಾಜು ಹಾಕಿರುವ ಬಗ್ಗೆ ಹುಬ್ಬಳ್ಳಿ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನಲ್ಲಿ ಏನಿದೆ?: ಇಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಉತ್ತರಪ್ರದೇಶದ ರಜತ್ ಶರ್ಮಾ ಎಂಬಾತ ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದಾನೆ. ನಂತರ ವಿಡಿಯೋ ಕಾಲ್, ವಾಟ್ಸ್‌ಆ್ಯಪ್ ಚಾಟ್, ಟೆಲಿಗ್ರಾಮ್ ವಿಡಿಯೋ, ಸ್ನಾಪ್‌ಚಾಟ್, ಇನ್‌ಸ್ಟಾಗ್ರಾಂ, ಪಿಂಟರೆಸ್ಟ್, ಇಮೇಲ್ಸ್, ಎಸ್‌ಎಂಎಸ್ ಮೂಲಕ ಚಾಟ್ ಮಾಡಿದ್ದಾನೆ. 9 ವಾಟ್ಸ್‌ಆ್ಯಪ್ ನಂಬರ್‌ಗಳ ಮುಖಾಂತರ ಚಾಟ್, ವಿಡಿಯೋ ಕಾಲ್ ಮಾಡಿದ್ದಾನೆ. ಆಗ ರಜತ್ ಹೇಳಿದಂತೆ ವಿದ್ಯಾರ್ಥಿನಿ ವಿವಸ್ತ್ರಳಾಗಿ ವಿಡಿಯೋ ಕಾಲ್ ಮಾಡಿದ್ದು, ಆ ಸಮಯದಲ್ಲಿ ಫೋಟೊ, ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾನೆ. ನಂತರ ಅವಳ ಹೆಸರಲ್ಲಿಯೇ ಇನ್ಸ್ಟಾಗ್ರಾಮ್ ನಕಲಿ ಖಾತೆ ತೆರೆದು ಅಶ್ಲೀಲ ಫೋಟೋ ಹಾಕಿ, ಇಮೇಲ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಹಿಂಸೆ ನೀಡುತ್ತಿದ್ದಾನೆ. ಈ ಮೂಲಕ ಮಾನ ಹರಾಜು ಹಾಕುತ್ತಿದ್ದಾನೆ ಎಂದು ವಿದ್ಯಾರ್ಥಿನಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


