ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಉಪಮೇಯರ್ ಆಯ್ಕೆ
ಬೆಳಗಾವಿ ಪಾಲಿಕೆ ಮೇಯರ್ ಆಗಿ ಪ್ರೀತಿ-ಉಪಮೇಯರ್ ಆಗಿ ಹಣಮಂತ ಆಯ್ಕೆ

ಬೆಳಗಾವಿ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದಿದ್ದು, ಬಿಜೆಪಿಯ ಪ್ರೀತಿ ವಿನಾಯಕ ಕಾಮಕರ್ ಮೇಯರ್ ಆಗಿ ಆಯ್ಕೆಯಾಗಿದ್ದು, ಉಪಮೇಯರ್ ಆಗಿ ಹಣಮಂತ ಕೊಂಗಾಲಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮತ್ತೆ ಬಿಜೆಪಿ ಬೆಳಗಾವಿಯಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ.
ತೀವ್ರ ಜಟಾಪಟಿಯ ನಡುವೆ ಕಾಂಗ್ರೆಸ್ ಬೆಂಬಲಿತ ಪ್ರತಿ ಸ್ಪರ್ಧಿ ಪಕ್ಷೇತರ ಅಭ್ಯರ್ಥಿಗಳಾದ ಖುರ್ಷಿದಾ ಮುಲ್ಲಾ ಹಾಗೂ ಮೋದಿನ ಸಾಬ್ ಮುತವಾಲಿ ಅವರಿಗೆ ತೀವ್ರ ಹಿನ್ನಡೆಯಾಗಿದ್ದು, ಬಿಜೆಪಿ ಮತ್ತೆ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಸಾಕಷ್ಟು ಪೈಪೋಟಿಯಿದ್ದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೇಕಾರ ಹಾಗೂ ಲಿಂಗಾಯತ ಸಮುದಾಯಗಳನ್ನು ಓಲೈಕೆ ಮಾಡಿದೆ. ಇದು ಸದ್ಯ ಬಿಜೆಪಿ ಮತ್ತೆ ಗೆಲ್ಲುವಲ್ಲಿ ಸಹಾಯ ಮಾಡಿದೆ. ಇನ್ನು, ಈ ಬಾರಿಯ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯ ಚುನಾವಣೆಯಲ್ಲಿ 65 ಅರ್ಹ ಮತಗಳಿದ್ದು, ಇವುಗಳ ಪೈಕಿ 59 ಅಭ್ಯರ್ಥಿಗಳು ಹಾಜರಿದ್ದು ಮತ ಚಲಾಯಿಸಿದ್ದಾರೆ. ಇನ್ನು, 6 ಜನ ಅಭ್ಯರ್ಥಿಗಳು ಗೈರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಭಾರಿ ಪೈಪೋಟಿಯ ನಡುವೆಯೂ ಮೇಯರ್ ಆಗಿ ಆಯ್ಕೆಯಾಗಿರುವ ಪ್ರೀತಿ ಕಾಮಕರ್ 39 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಇನ್ನು, ಇವರ ಪ್ರತಿ ಸ್ಪರ್ಧಿಯಾಗಿದ್ದ ಖುರ್ಷಿದಾ ಮುಲ್ಲಾ 18 ಮತಗಳನ್ನು ಪಡೆಯುವ ಮೂಲಕ ಹಿನ್ನಡೆಯನ್ನು ಸಾಧಿಸಿದ್ದಾರೆ.
ಇತ್ತ, ಉಪಮೇಯರ್ ಸ್ಥಾನಕ್ಕೆ ಆಯ್ಕೆಯಾದ ಹಣಮಂತ ಕೊಂಗಾಲಿ ಅವರು ಸಹ 39 ಮತಗಳನ್ನು ಪಡೆದು ವಿಜೇತರಾದರೆ, ಇವರ ಪ್ರತಿಸ್ಪರ್ಧಿ ಲಕ್ಷ್ಮೀ ಲೋಕರಿ ಕೇವಲ 18 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅವರು ಘೋಷಣೆ ಮಾಡಿದ್ದಾರೆ. ಹೀಗೆ ಭಾರಿ ಬಹುಮತವನ್ನು ಪಡೆಯುವ ಮೂಲಕ ಬಿಜೆಪಿ ಮತ್ತೆ ಬೆಳಗಾವಿಯಲ್ಲಿ ಗೆದ್ದು ಬೀಗಿದ್ದು, ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ.


