BREAKING : ಬಾಗಪ್ಪ ಹರಿಜನ ಕೊಲೆ ಪ್ರಕರಣ. ನಾಲ್ವರು ಆರೋಪಿಗಳು ಅರೆಸ್ಟ್.!

ವಿಜಯಪುರ: ಭೀಮಾ ತೀರದ ರೌಡಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಜಯಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ವಿಜಯಪುರ ಎಸ್ ಪಿ ಲಕ್ಷ್ಮಣ ನಿಂಬರಗಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಬಂಧಿತ ಆರೋಪಿಗಳನ್ನು ಪ್ರಕಾಶ್ ಲಕ್ಷ್ಮಣ ಮೇಲಿನಕೇರಿ, ರಾಹುಲ್ ಭೀಮಾಶಂಕರ್ ತಳಕೇರಿ, ಸುದೀಪ್ ಕಾಂಬಳೆ ಹಾಗೂ ಮಣಿಕಂಠ ಬೆನಕೊಪ್ಪ ಎಂದು ಗುರುತಿಸಲಾಗಿದೆ. ಬಂಧಿತ ಮೂವರು ಆರೋಪಿಗಳು ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಮತ್ತೋರ್ವ ಆರೋಪಿ ಮಣಿಕಂಠ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ನಿವಾಸಿಯಾಗಿದ್ದು. ಬಂಧಿತರ ಪೈಕಿ ರಾಹುಲ್ ಹೊರತು ಪಡಿಸಿ ಉಳಿದವರಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎನ್ನಲಾಗಿದೆ.
ಇದೇ ಮೊದಲ ಬಾರಿಗೆ ಉಳಿದವರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

ಸೇಡಿನ ಕೊಲೆ:
ವಿಜಯಪುರ ಎಸ್ ಪಿ ಲಕ್ಷ್ಮಣ ನಿಂಬರಗಿ ಹೇಳಿಕೆಯಂತೆ ಇದೊಂದು ಸೇಡಿನ ಕೊಲೆ ಎಂದು ಹೇಳಲಾಗಿದೆ, ಆಸ್ತಿ ವಿಚಾರವಾಗಿ ರವಿ ಹಾಗೂ ಭಾಗಪ್ಪ ನಡುವೆ ಈ ಹಿಂದೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕಾಗಿ ಭಾಗಪ್ಪನ ಶಿಷ್ಯರು ರವಿಯನ್ನು ಈ ಹಿಂದೆ ಹತ್ಯೆ ಮಾಡಿದ್ದರು ಎನ್ನಲಾಗಿದೆ. ರವಿ ಹತ್ಯೆಗೆ ಪ್ರತಿಕಾರವಾಗಿ ಆತನ ತಮ್ಮ ಪ್ರಕಾಶ ಮೇಲಿನಕೇರಿ ಬಾಗಪ್ಪನನ್ನ ಹತ್ಯೆಗೈದು ಸೇಡು ತಿರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕೃತ್ಯಕ್ಕೆ ಬಳಸಿದ ಸೊತ್ತು ವಶ:
ಪಿಸ್ತೂಲ್ ಬಳಸಿ ಗುಂಡು ಹಾರಿಸಿ ಬಳಿಕ ಮಚ್ಚಿನಿಂದ ಹೊಡೆದು ಬಾಗಪ್ಪ ಹರಿಜನ ಹತ್ಯೆಗೈಯಲಾಗಿದ್ದು ಪೊಲೀಸರು ಆರೋಪಿಗಳಿಂದ ಪಿಸ್ತೂಲ್, ಮಚ್ಚು, ಸೇರಿದಂತೆ ಕೃತ್ಯಕ್ಕೆ ಬಳಸಿದ ಆಟೋ ಮತ್ತು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


