ಬೇಸಿಗೆ ಆರಂಭಕ್ಕೂ ಮೊದಲೇ ಆರಂಭವಾಗಿರುವ ಬಿರುಬಿಸಿಲು ಜನರನ್ನು ಹೈರಾಣ

ಈ ಬಾರಿ ಉತ್ತಮ ಮಳೆಯಾಗಿದೆ, ಬೇಸಿಲು ಕಡಿಮೆ ಇರಬಹುದು ಎಂಬ ಜನರ ನಿರೀಕ್ಷೆಗಳು ಹುಸಿಯಾಗುತ್ತಿದೆ. ಬೇಸಿಗೆ ಆರಂಭಕ್ಕೂ ಮೊದಲೇ ಆರಂಭವಾಗಿರುವ ಬಿರುಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ.
ಹೊರಗೆ ದುಡಿಯುವವರು, ಕೂಲಿ, ಕಟ್ಟಡ ಕಾರ್ಮಿಕ ವರ್ಗದವರಂತೂ ಬಿಸಿಲಿನ ಝಳದಿಂದಾಗಿ ಬಸವಳಿಯುವಂತಾಗಿದೆ.
ಚಳಿಗಾಲದಲ್ಲೇ, ಅಂದರೆ ಫೆಬ್ರುವರಿ ಆರಂಭದಿಂದಲೇ ಬಿಸಿಲ ತಾಪ ಹೆಚ್ಚಾಗಿದೆ. ಗರಿಷ್ಠ ಉಷ್ಣಾಂಶ ಸರಾಸರಿ 34 ಡಿಗ್ರಿ ಸೆಲ್ಸಿಯಸ್‌ನಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದೆ. ಕನಿಷ್ಟ ಉಷ್ಠಾಂಶ 21 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮಧ್ಯಾಹ್ನದ ವೇಳೆ ಜನರು ಮನೆಯಿಂದ ಹೊರಗೆ ಕಾಲಿಡಲು ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಿಗ್ಗೆಯಿಂದಲೇ ಪ್ರತಾಪ: ಬಳ್ಳಾರಿ ನಗರದಲ್ಲಿ ಮಂಗಳವಾರ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆ. ಇದ್ದರೆ, ಗರಿಷ್ಠ 34.7 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಏರುವ ಸಾಧ್ಯತೆಗಳಿವೆ. ಹಿಂದಿನ ವರ್ಷಕ್ಕಿಂತಲೂ ಈ ವರ್ಷ ಹೆಚ್ಚು ಬೇಗೆ ಇದೆ ಎನ್ನಲಾಗಿದೆ,
ಬೆಳಿಗ್ಗೆ 7ರಿಂದಲೇ ಬಿಸಿಲ ತಾಪದ ಅನುಭವವಾಗುತ್ತಿದ್ದು, ಹೊತ್ತು ಕಳೆದಂತೆಲ್ಲ ಮೈ ಚುರುಗುಟ್ಟುವ ಬಿಸಿಲು ಕಾಡ ತೊಡಗಿದೆ. ಮಧ್ಯಾಹ್ನದ ವೇಳೆಗೆ ಬಿಸಿಗಾಳಿಯ ಅನುಭವ ಆಗುತ್ತಿದೆ. ರಾತ್ರಿ ವೇಳೆಯಲ್ಲಿ ವಿಪರೀತ ಸೆಕೆಯ ವಾತಾವರಣ ಇದ್ದು, ಜನ ಕೂಲರ್, ಎಸಿಗಳಿಗೆ ಮೊರೆ ಹೋಗುತ್ತಿದ್ದಾರೆ.
ಹವಾಮಾನ ವೈಪರೀತ್ಯ ಕಾರಣ: ‘ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಜಿಲ್ಲೆಯಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಪ್ರತಿ ವರ್ಷ ತಾಪಮಾನ ಏರುತ್ತಲೇ ಇದೆ. ಅದೇ ಪ್ರವೃತ್ತಿ ಈ ಬಾರಿಯೂ ಮುಂದುವರಿದಿದೆ. ಹಿಂದೆಲ್ಲಾ ಫೆಬ್ರುವರಿಯಲ್ಲಿ ಸರಾಸರಿ 30ರಿಂದ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇರುತ್ತಿತ್ತು. ಈಗ ಸರಾಸರಿ 34ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಏಪ್ರಿಲ್- ಮೇ ತಿಂಗಳಲ್ಲಿ ತಾಪಮಾನ ತೀವ್ರವಾಗಿರಲಿದೆ’ ಎಂದು ಹವಾಮಾನ ಇಲಾಖೆಯ ತಿಳಿಸಿದ್ದಾರೆ.
‘ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಮುಂದಿನ ಐದು ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ. ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ಸಾಧ್ಯತೆ ಇದೆ. ಬೆಳಗಿನ ಗಾಳಿಯ ತೇವಾಂಶ ಶೇ 40-85.2ರವರೆಗೆ ಮತ್ತು ಇರಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಗ್ಯದ ಕಾಳಜಿ ವಹಿಸಿ: ‘ತಾಪಮಾನ ಏರಿಕೆಯಿಂದಾಗಿ ಜನರಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬಿಸಿಲು ಹೆಚ್ಚಿದಷ್ಟು ವೈರಾಣು ಜ್ವರ, ವಾಂತಿ-ಬೇಧಿಯಂತಹ ಸಮಸ್ಯೆ ಜಾಸ್ತಿಯಾಗುತ್ತಿವೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬಿರು ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸುವುದು ಒಳಿತು. ತುಂಬಾ ಬಿಸಿಲು ಇರುವುದರಿಂದಾಗಿ, ಮಕ್ಕಳು-ವೃದ್ಧರು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎನ್ನುವ ಸಲಹೆ ವೈದ್ಯರದಾಗಿದೆ.
ಬಿಸಿಲಿನ ಕಾರಣದಿಂದಾಗಿ ಜನರು ತಂಪು ಪಾನೀಯ, ಐಸ್‌ಕ್ರೀಂ, ಎಳನೀರು ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ. ಜಿಲ್ಲೆಯ ಬಹುತೇಕ ಕಡೆಳಲ್ಲಿ ಕಬ್ಬಿನಿ ಹಾಲಿನ ಅಂಗಡಿಗಳು ತಲೆ ಎತ್ತಿವೆ. ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ಬಂದಿದ್ದು ಬೇಡಿಕೆ ಕಂಡುಬರುತ್ತಿದೆ.